UDAYAVANI NEWS
ಮಸ್ಕಿ, ಜನವರಿ 07 : ನೀರಿನ ಸಂರಕ್ಷಣೆಗಾಗಿ ಸರ್ಕಾರ ಜಲ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು, ಇದರ ಆಧಾರದ ಮೇಲೆ 2023-24 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಮಸ್ಕಿ ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರೆಡ್ಡಿ ಹೇಳಿದರು.
ಮಸ್ಕಿ ತಾಲೂಕು ಪಂಚಾಯತಿ ಕಚೇರಿಯಲ್ಲಿ ಗುರುವಾರ ಕ್ರಿಯಾ ಯೋಜನೆ ತಯಾರಿಸುವ ಸಲುವಾಗಿ ತಾಂತ್ರಿಕ ಸಹಾಯಕ ಅಭಿಯಂತರರು, ಬಿಎಫ್ಟಿ, ಜಿಕೆಎಂಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿರುವ ಜಲ ಮೂಲಗಳು, ಗೋಮಾಳ ಜಾಗವನ್ನು ಗುರುತಿಸಲು ಎಫ್ಇಎಸ್ ಸಂಸ್ಥೆ ಕ್ಲಾರ್ಟ್ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲಿ ಸರ್ವೇ ಕೈಗೊಂಡು, ತಂತ್ರಾಂಶದಲ್ಲಿ ಮಾಹಿತಿ ದಾಖಲಿಸಬೇಕು. ಮುಂದೆ ಕ್ರಿಯಾ ಯೋಜನೆ ತಯಾರಿಸುವಾಗ ಈ ಅಂಶಗಳನ್ನು ಪರಿಗಣಿಸಬೇಕು. ತಹಸೀಲ್ದಾರ್ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ಸಭೆ ಕರೆದು, ಗೋಮಾಳ ಭೂಮಿ ಗುರುತಿಸಿ, ಹದ್ದುಬಸ್ತ್ ಕೈಗೊಳ್ಳಲು ನಿರ್ದೇಶನ ನೀಡುವಂತೆ ತಿಳಿಸಲಾಗುವುದು ಎಂದರು.
ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ಎನ್ಎಂಎಂಎಸ್ ನಲ್ಲಿ ಕೂಲಿ ಕಾರ್ಮಿಕರ ಹಾಜರಾತಿ ದಾಖಲಿಸಬೇಕು. ವೈಯಕ್ತಿಕ, ಸಮುದಾಯ ಕಾಮಗಾರಿಗಳ ನಾಮಫಲಕದ ಜತೆಗೆ ಮೂರು ಹಂತದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ಫೈಲ್ ಮಾಡಬೇಕು ಎಂದು ತಿಳಿಸಿದರು. ಈ ವೇಳೆ ತಾಂತ್ರಿಕ ಸಂಯೋಜಕರಾದ ಶಿವಲಿಂಗಯ್ಯ ಹಿರೇಮಠ, ಟಿಐಇಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು