UDAYAVANI NEWS
ಮಾನ್ವಿ, ಡಿಸೆಂಬರ್ 14 : ತಾಲೂಕಿನ ಹಿರಿಯ ಪತ್ರಕರ್ತ ವಿ.ಶ್ರೀನಿವಾಸರಾವ್ (60) ಮಂಗಳವಾರ ರಾತ್ರಿ ಕೊಟ್ಟಾಯಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರತಿವರ್ಷ ಅಯ್ಯಪ್ಪಸ್ವಾಮಿ ಮಾಲೆ ಹಾಕುತ್ತಿದ್ದ ಇವರು ಈ ವರ್ಷವೂ ಕೂಡಾ ಅಯ್ಯಪ್ಪಸ್ವಾಮಿ ಮಾಲೆ ಹಾಕಿ ಹಿರೇಕೊಟ್ನೆಕಲ್ ಗ್ರಾಮದ ಸ್ನೇಹಿತರೊಂದಿಗೆ ಜೀಪಿನಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿದ್ದರು. ದಾರಿ ಮಧ್ಯೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಸಮೀಪದ ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಗೋಪಿಕಾ ದೇಸಾಯಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಬಿಟ್ಟಗಲಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಇವರ ಪುತ್ರ ಮಣಿಕಂಠ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು.
ಕಳೆದ 25 ವರ್ಷಗಳಿಂದ ಮಾನ್ವಿ ತಾಲೂಕಿನಲ್ಲಿ ಕ್ರಿಯಾಶೀಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಇವರು ಆರಂಭದಲ್ಲಿ ಈ ನಾಡು, ಸಂಯುಕ್ತ ಕರ್ನಾಟಕ ಹಾಗೂ ಹೆಚ್ಚಿನ ಅವಧಿ ರಾಯಚೂರು ವಾಣಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ನಿಧನದ ಸುದ್ದಿ ತಿಳಿದು ವಿ.ಶ್ರೀನಿವಾಸರಾವ್ ಅವರ ಪುತ್ರಿ ಮತ್ತು ಸಂಭಂಧಿಕರು ಕೊಟ್ಟಾಯಂಗೆ ತೆರಳಿದ್ದು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಪಾರ್ಥಿವ ಶವವನ್ನು ಮಾನ್ವಿಗೆ ತಂದು ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿದುಬಂದಿದೆ.
Tags
ಜಿಲ್ಲಾ ಸುದ್ದಿಗಳು