UDAYAVANI NEWS
ರಾಯಚೂರು, ಡಿಸೆಂಬರ್ 02 : ಚಲನಚಿತ್ರ ನಟ ಶಿವರಾಜ್‌ಕುಮಾರ್ ಅವರ 125ನೇ ಚಲನಚಿತ್ರ 'ವೇದ' ಬಿಡುಗಡೆಯ ಪೂರ್ವ ಪ್ರಚಾರವನ್ನು ರಾಯಚೂರಿನಿಂದಲೇ ಆರಂಭಿಸಲಿದ್ದಾರೆ. ಇದಕ್ಕಾಗಿ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶಾಲವಾದ ವೇದಿಕೆ ಸಜ್ಜುಗೊಳಿಸಲಾಗಿದೆ ಎಂದು ವಿ.ಜೆ.ಇಂಟರ್‌ನ್ಯಾಷನಲ್ ಪ್ರೊಡಕ್ಷನ್ ಮುಖ್ಯಸ್ಥ ವಿರೇಂದ್ರ ಜಲ್ದಾರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 3 ರಂದು ಸಂಜೆ 4.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಸಾಕಷ್ಟು ಪಾಸ್‌ಗಳನ್ನು ವಿತರಿಸಲಾಗಿದೆ. ಗಣ್ಯರು, ಅತಿಗಣ್ಯರು, ಮಾಧ್ಯಮಗಳು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಚಲನಚಿತ್ರ ನಟ ಶಿವರಾಜಕುಮಾರ್ ಅವರು ವೇದ ಸಂಭ್ರಮ ಕಾರ್ಯಕ್ರಮದಲ್ಲಿ ಚಿತ್ರದ ಟೀಜರ್ ಬಿಡುಗಡೆ ಮಾಡಲಿದ್ದಾರೆ. ರಾಯಚೂರಿಗೆ ಇದೇ ಮೊದಲ ಬಾರಿ ಅವರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಅವರೊಂದಿಗೆ ಚಲನಚಿತ್ರ ನಿರ್ದೇಶಕ ಹರ್ಷಾ, ಸಂಗೀತ ನಿರ್ದೇಶಕ ಅರ್ಜುನ ಜನ್ಯಾ, ನಿರೂಪಕಿ ಅನೂಶ್ರೀ ಸೇರಿದಂತೆ ಅನೇಕ ಸಹಾಯಕ ಕಲಾವಿದರು, ತಾಂತ್ರಿಕ ನಿರ್ವಾಹಕರು ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ನಟ ಶಿವರಾಜಕುಮಾರ್ ಅವರು ಬೆಂಗಳೂರಿನಿಂದ ಶುಕ್ರವಾರ ರಾತ್ರಿ ರೈಲಿನಿಂದ ಹೊರಟು ರಾಯಚೂರಿಗೆ ಶನಿವಾರ ಬೆಳಿಗ್ಗೆ ತಲುಪಲಿದ್ದು, ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆಯಲಿದ್ದಾರೆ. ಆನಂತರ ವೇದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು, ಶನಿವಾರ ರಾತ್ರಿಯೇ ಬೆಂಗಳೂರಿನತ್ತ ಪ್ರಯಾಣಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ವಿಶ್ವಾಸ್ ವಿರೇಂದ್ರ ಜಲ್ದಾರ್ ಮಾತನಾಡಿ, 'ತಂದೆಯ ಮಾರ್ಗದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಬೆಂಗಳೂರಿನಲ್ಲಿಯೇ ವಿ.ಜೆ.ಟೆಕ್ನೊಟ್ರ್ಯಾಕ್ ಕಂಪೆನಿ ಸ್ಥಾಪಿಸಿದ್ದೇನೆ. ಅದರ ಒಂದು ಶಾಖೆ ರಾಯಚೂರಿನಲ್ಲಿಯೂ ಇದೆ. ವೇದ ಸಂಭ್ರಮ ಕಾರ್ಯಕ್ರಮದ ವೇದಿಕೆ ಮೂಲಕ ಸಾಧನೆ ಆರಂಭಿಸುತ್ತಿದ್ದು, 10 ಭಾಷೆಗಳಲ್ಲಿ ಹಾಡಲಿದ್ದೇನೆ. ರಾಯಚೂರಿನ ಜನರೆಲ್ಲ ಬೆಂಬಲಿಸಬೇಕು' ಎಂದು ಕೋರಿದರು.
Tags
ಜಿಲ್ಲಾ ಸುದ್ದಿಗಳು