ದೇವನಾಂಪ್ರಿಯ ಪದವಿ ಕಾಲೇಜಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಸೇರ್ಪಡೆಯ ಜಾಗೃತಿ ಅಭಿಯಾನ ಕಾರ್ಯಕ್ರಮ

ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಡಿಸೆಂಬರ್ 06 : 18 ವರ್ಷ ದಾಟಿದ ಯುವ ಸಮೂಹ ಮತದಾರರ ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಬೇಕು ಎಂದು ಮಸ್ಕಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಪವನ್ ಕುಮಾರ್ ಸಲಹೆ ನೀಡಿದರು.
ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ನಿಮಿತ್ತ ಐಕ್ಯುಎಸಿ ಹಾಗೂ ಇಎಲ್ಸಿ ಅಡಿಯಲ್ಲಿ ಏರ್ಪಡಿಸಿದ್ದ ಮತದಾರರ ನೋಂದಣಿ, ಹೊಸ ಹೆಸರು ಸೇರ್ಪಡೆ, ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. 

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಇಡೀ ವಿಶ್ವಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಯಾಗಿದೆ. ಇದನ್ನು ಮತ್ತಷ್ಟು ಬಲಿಷ್ಠಗೊಳಿಸಲು ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಈ ಹಿಂದೆ ಜನ್ಮ ದಿನಾಂಕ ಆಧರಿಸಿ, ವರ್ಷದಲ್ಲಿ ಒಮ್ಮೆ ಹೊಸ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶವಿತ್ತು. ಆದರೆ, ಈಗ ಪ್ರತಿ ಮೂರು ತಿಂಗಳಿಗೊಮ್ಮೆ ಈ ಪ್ರಕ್ರಿಯೆ ಜರುಗುತ್ತಿದೆ. ಇದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಸ್ಕಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ರಾಷ್ಟ್ರದ ಭವಿಷ್ಯ ಯುವ ಸಮೂಹವನ್ನು ಆಧರಿಸಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪಾತ್ರ ವಹಿಸಲಿದೆ. ಪ್ರತಿಯೊಬ್ಬರು ಸಂವಿಧಾನ ಬದ್ದ ಹಕ್ಕು ಚಲಾಯಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನ ವಿವಿಧೆಡೆ ಅಭಿಯಾನ ಏರ್ಪಡಿಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪಂಪನಗೌಡ ಮಾತನಾಡಿ, ಜನವರಿ 1, 2023 ಕ್ಕೆ 18 ವರ್ಷ ತುಂಬುವವರು ಮತ್ತು 18 ವರ್ಷ ಮೇಲ್ಪಟ್ಟ ಎಲ್ಲರೂ ತಮ್ಮ ಹೆಸರುಗಳನ್ನು ಡಿ. 8 ರೊಳಗೆ ನೋಂದಾಯಿಸಿಕೊಳ್ಳಬಹುದು. ವೋಟರ್ ಹೆಲ್ಪ್ ಲೈನ್ ತಂತ್ರಾಂಶ ಡೌನ್ಲೋಡ್ ಮಾಡಿ ಲಾಗಿನ್ ಆಗಬಹುದು ಎಂದರು. 


ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ್, ತಾಲೂಕು ಪಂಚಾಯತಿ ಯೋಜನಾಧಿಕಾರಿ ಇಬ್ರಾಹಿಂ ಪಟೇಲ್, ಐಕ್ಯುಎಸಿ ಸಂಚಾಲಕಿ ರೋಹಿಣಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿಯರಾದ ನಾಗರತ್ನ, ಕವಿತಾ ಪ್ರಾರ್ಥಿಸಿದರು. ಸಮಾಜ ಶಾಸ್ತ್ರ ಉಪನ್ಯಾಸಕಿ ಅಶ್ವಿನಿ ಪಿ.ಆರ್. ಸ್ವಾಗತಿಸಿದರೆ ಕನ್ನಡ ಉಪನ್ಯಾಸಕ ಪ್ರಭುದೇವ ಸಾಲಿಮಠ ನಿರೂಪಿಸಿ, ಆಂಗ್ಲ ಭಾಷೆ ಉಪನ್ಯಾಸಕಿ ಅಶ್ವಿನಿ ವಂದಿಸಿದರು. 


Post a Comment

Previous Post Next Post