UDAYAVANI NEWS
ಮಸ್ಕಿ, ಡಿಸೆಂಬರ್ 10 : ತಾಲೂಕಿನ ಬಪ್ಪೂರು,ಗುಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದಡಿ ನಿರ್ಮಿಸಿದ ಕಸ ವಿಲೇವಾರಿ ಘಟಕದ ಜತೆಗೆ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಸ್ಕಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಶುಕ್ರವಾರ ಪರಿಶೀಲಿಸಿದರು.
ಬಪ್ಪೂರು ಗ್ರಾಪಂಯ ಗದ್ರಟಗಿ ಶಾಲೆಯ ಆಟದ ಮೈದಾನ ಅಭಿವೃದ್ಧಿ, ಶಾಲೆ ಕಂಪೌಂಡ್, ಹೈಟೆಕ್ ಶೌಚಗೃಹ, ತಲೇಖಾನ ಗ್ರಾ.ಪಂ ನೂತನ ಕಟ್ಟಡ ವೀಕ್ಷಿಸಿದರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಎಸ್ ಎಲ್ ಡಬ್ಲ್ಯು ಎಂ ಘಟಕಕ್ಕೆ ಹೋಗುವ ದಾರಿಯಲ್ಲಿ ಇರುವ ಹಳ್ಳಕ್ಕೆ ಸಿಡಿ ನಿರ್ಮಿಸಬೇಕು ಎಂದು ಬಪ್ಪೂರು ಗ್ರಾಪಂ ಅಧ್ಯಕ್ಷ ಗುಂಡಪ್ಪ ಮನವಿ ಮಾಡಿದರು. ಈ ಬಗ್ಗೆ ಜಿ.ಪಂ ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಇಒ ಪವನ್ ಕುಮಾರ್ ತಿಳಿಸಿದರು.
ಗುಂಡ ಗ್ರಾಪಂ ಮುಂದೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಸ್ವ ಸಹಾಯ ಸಂಘದ ಮಹಿಳೆಯರಿಗೆ ಕಸ ಸಂಗ್ರಹಣೆ, ವಿಂಗಡಣೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಮಾರಾಟ ಸೇರಿ ಇಡೀ ಘಟಕದ ನಿರ್ವಹಣೆಯನ್ನು ವಹಿಸಲಾಗುತ್ತಿದೆ. ಈ ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು. ಬೋಗಾಪುರದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಿಡಿಪಿಯು ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಅಭಿಯಂತರರಾದ ಸೋಮಶೇಖರ್, ಶಿವಕುಮಾರ ಯಾದವ್, ಕಂಪ್ಯೂಟರ್ ಆಪರೇಟರ್ ನಾಗಪ್ಪ, ದುರ್ಗೇಶ್, ಬಿಎಫ್ಟಿ ಸುಖಮುನಿ, ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಗುಂಪಿನ ಮಹಿಳೆಯರು, ಗ್ರಾಪಂ ಸದಸ್ಯರು ಇದ್ದರು.
Tags
ಜಿಲ್ಲಾ ಸುದ್ದಿಗಳು