UDAYAVANI NEWS
ಕೊಪ್ಪಳ, ಡಿಸೆಂಬರ್ 10 : ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ಸಂಪೂರ್ಣವಾಗಿ ವಿದ್ಯಾರ್ಥಿವೇತನ ಬಿಡುಗಡೆ ಮಾಡುವಂತೆ ಹಾಗೂ ಹಾಸ್ಟೆಲ್ ಸಂಖ್ಯೆಗಳ ಹೆಚ್ಚಳಕ್ಕೆ ಆಗ್ರಹಿಸಿ, ಇನ್ನಿತರೆ ಬೇಡಿಕೆಗಳೊಂದಿಗೆ ಕೊಪ್ಪಳದ ಅಶೋಕ ವೃತ್ತದಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗುರಳ್ಳಿ ರಾಜ ಅವರು “ರಾಜ್ಯದ ಪದವಿ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಸರ್ಕಾರ ಅತ್ಯಂತ ನಿರ್ಲಕ್ಷ್ಯ ತೋರಿಸುತ್ತಿದೆ. ಈಗಾಗಲೇ NEP ಮೊದಲ ಬ್ಯಾಚ್ ನ ವಿದ್ಯಾರ್ಥಿಗಳ ಪರೀಕ್ಷೆ ಮುಗಿದು ಮುಂದಿನ ಹಂತಕ್ಕೆ ತಲುಪಿದ್ದಾರೆ. ಆದರೆ ಅವರ ಮೊದಲ ವರ್ಷದ ಫಲಿತಾಂಶ ಬಿಡುಗಡೆಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಾಗಿ ಅರ್ಜಿ ಸಲ್ಲಿಸಲು ಅಗಾಧ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಹಾಗಾಗಿ, ಈ ಕೂಡಲೇ NEP -20 ಬ್ಯಾಚ್ ಪದವಿ ವಿದ್ಯಾರ್ಥಿಗಳ ಫಲಿತಾಂಶವನ್ನು ಬಿಡುಗಡೆ ಮಾಡಬೇಕು. ಇದರೊಂದಿಗೆ, ವಿದ್ಯಾರ್ಥಿವೇತನ ವಿತರಣೆ ಆಗದಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ನೂರಾರು ಬಡ ಕುಟುಂಬದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಪೂರೈಕೆಗಾಗಿ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿರುತ್ತಾರೆ. ವಿದ್ಯಾರ್ಥಿವೇತನ ಸಿಗದಿದ್ದರೆ, ಅವರಲ್ಲಿ ಬಹುಪಾಲು ಜನ ಶಿಕ್ಷಣವನ್ನು ಪೂರೈಸುವುದು ಕಷ್ಟಕರವಾಗುತ್ತದೆ. ಒಂದೆಡೆ ವಿದ್ಯಾರ್ಥಿವೇತನದ ಹಕ್ಕನ್ನು ಸರ್ಕಾರ ಕಸಿದುಕೊಳ್ಳುತ್ತಿದೆ. ಇನ್ನೊಂದೆಡೆ ಪ್ರತಿವರ್ಷದಂತೆ ಶೈಕ್ಷಣಿಕ ಶುಲ್ಕವನ್ನು ಏರಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಈಗಾಗಲೇ ಮೂರು ಬಾರಿ ಪದವಿ ಕೋರ್ಸ್ ಗಳ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಈ ಕೂಡಲೇ ಪದವಿ ಇಂತಹ ವಿದ್ಯಾರ್ಥಿ ವಿರೋಧಿ ನಿಲುವನ್ನು ಸರ್ಕಾರ ಕೈಬಿಡಬೇಕು ಮತ್ತು ಈ ಕೂಡಲೇ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು. ಮುಂದುವರೆದು, ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಗಳು ಇಲ್ಲ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮೂಲಭೂತ ಅವಶ್ಯಕತೆಯಾಗಿದೆ. ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸಂಖ್ಯೆಗಳನ್ನು ಹೆಚ್ಚಿಸಬೇಕು ಮತ್ತು ದಾಖಲಾತಿಯನ್ನು ಹೆಚ್ಚಿಸಬೇಕು. ಅದೇ ರೀತಿ ಕೊಪ್ಪಳ ಜಿಲ್ಲೆಯಲ್ಲೂ ಪದವಿ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಟ್ಟಡ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಗಳನ್ನು ಒದಗಿಸಿ, ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ನೂತನ ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಗಂಗರಾಜ ಅಳ್ಳಳ್ಳಿ ವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಸದಸ್ಯರಾದ ನಂದೀಶ್, ಬಸವರಾಜ್, ಪಕೀರ್ ಸ್ವಾಮಿ, ಅನಿಲ್ ಕುಮಾರ್, ಶ್ರೀನಿವಾಸ, ಮಾರುತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಎಐಡಿಎಸ್ಓ ವಿಧ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿಯವರು ತಿಳಿಸಿದ್ದಾರೆ.
Tags
ಜಿಲ್ಲಾ ಸುದ್ದಿಗಳು