UDAYAVANI NEWS
ಮಸ್ಕಿ, ಡಿಸೆಂಬರ್ 28 : ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಾಲೂಕು ಸಮಿತಿ ವತಿಯಿಂದ ಪಟ್ಟಣದ ಪತ್ರಿಕಾ ಭವನದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಲಿಂಗಸುಗೂರು ಹಾಗೂ ಕನಕಗಿರಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಅಸ್ಪೃಶ್ಯ ಸಮಾಜದ ಸಮರ್ಥ ಆಕಾಂಕ್ಷಿಗೆ ಟಿಕೆಟ್ ನೀಡುವಂತೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
2008ರ ಕರ್ನಾಟಕ ವಿಧಾನಸಭಾ ಚುನಾವಣೆ ಕ್ಷೇತ್ರಗಳ ಮರು ಪುನರ್ ವಿಂಗಡಣೆಯಿಂದ ರೈಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆಯಾ ಕ್ಷೇತ್ರಗಳ ಜನಸಂಖ್ಯೆ ಆಧಾರದ ಮೇಲೆ ರಾಯಚೂರು ನಗರ ಮತ್ತು ಸಿಂಧನೂರು (ಸಾಮಾನ್ಯ), ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ, ಮಸ್ಕಿ (ಎಸ್. ಟಿ) ಮೀಸಲು ಹಾಗೂ ಲಿಂಗಸ್ಗೂರು (ಪ.ಜಾತಿ) ಮೀಸಲು ಮತ್ತು ಕೊಪ್ಪಳ ಜಿಲ್ಲೆಯ ಕನಕಗಿರಿ (ಪ. ಜಾತಿ) ಮೀಸಲು ಕ್ಷೇತ್ರವಾಗಿ ಚುನಾವಣೆ ಆಯೋಗ ಘೋಷಣೆ ಮಾಡಿದೆ.
ಆಡು ಮುಟ್ಟದ ಸೊಪ್ಪಿಲ್ಲ ಹೊಲೆ ಮಾದಿಗರಿಲ್ಲದ ಊರಿಲ್ಲ, ಎಂಬಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಎಡ ಮತ್ತು ಬಲ (ಅಸ್ಪೃಶ್ಯ) ಸಮುದಾಯ ಗಣನೀಯ ಸಂಖ್ಯೆಯಲ್ಲಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ರಿಂದ 60 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಸದರಿ ಸಮುದಾಯವು ಪಾರಂಪರಿಕ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದ್ದು, ಪ್ರತಿ ಕ್ಷೇತ್ರದ ಅಭ್ಯರ್ಥಿಗಳನ್ನು ಜಯಶಾಲಿಯನ್ನಾಗಿಸುವ ಮತ್ತು ಪರಾಭವಗೊಳಿಸುವಂತಹ ಶಕ್ತಿ ಈ ಸಮುದಾಯಕ್ಕೆ ಇದೆ. ಆದರೆ ಸ್ಪೃಶ್ಯ ಜಾತಿಯ ಭೋವಿ ಸಮಾಜಕ್ಕೆ ಆ ಶಕ್ತಿ ಇಲ್ಲ. ಅವರ ಜನಸಂಖ್ಯೆ ಲಿಂಗಸ್ಗೂರು ಮತ್ತು ಕನಕಗಿರಿ ಕ್ಷೇತ್ರ ಎರಡು ಸೇರಿದರೆ ಕೇವಲ ಏಳರಿಂದ ಎಂಟು ಸಾವಿರದಷ್ಟು ಮಾತ್ರ. ರಾಜಕೀಯ ಶಕ್ತಿ ಎಂಬುದೊಂದು ಪ್ರಬಲ ಅಸ್ತ್ರ ಸಾಮಾಜಿಕ ಸಮಾನತೆ ದೊರಕದೆ ಹೋದರೆ ರಾಜಕೀಯ ಸಮಾನತೆ ಅರ್ಥ ಕಳೆದುಕೊಳ್ಳುತ್ತದೆ. ಹಾಗೂ ಸಾಮಾಜಿಕ ನ್ಯಾಯ ಮರೆಯಾಗುತ್ತದೆ. ಶತಶತಮಾನಗಳಿಂದ ಶೋಷಣೆಗೆ ಒಳಪಟ್ಟ ಈ ಸಮುದಾಯ ರಾಜಕೀಯದಿಂದ ವಂಚಿತವಾಗಬಾರದು. ಸಂವಿಧಾನ ಅಡಿ ಕೊಡ ಮಾಡಿರುವ ಮೀಸಲಾತಿ ಅವಕಾಶವನ್ನು ಇವರೇ ಪಡೆಯಬೇಕು. ಇಲ್ಲವಾದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತಹ ಸವಿಧಾನ ಬದ್ಧ ಹಕ್ಕನ್ನು ತಾವು ಕಸಿದುಕೊಂಡಂತಾಗುತ್ತದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ರಾಯಚೂರು ಜಿಲ್ಲೆಯ ಲಿಂಗಸುಗೂರು ಈ ಎರಡು ಕ್ಷೇತ್ರಗಳಲ್ಲಿ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿದ್ದಾದರೆ ಅಸ್ಪೃಶ್ಯ ಸಮಾಜದ ಎಡ ಮತ್ತು ಬಲ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಮುಂಬರುವ 2023 ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಲಿಂಗಸಗೂರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಈಗಾಗಲೇ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿರುವ ಅಸ್ಪೃಶ್ಯ ಸಮಾಜದ ಅರ್ಹತೆವುಳ್ಳ ಮತ್ತು ಗೆಲ್ಲುವ ಸಮರ್ಥವಾಗಿರುವ ವ್ಯಕ್ತಿಗೆ ಪಕ್ಷದ ಮಾನದಂಡಗಳ ಆಧರಿಸಿ ಪಕ್ಷದಿಂದ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಾಲೂಕು ಸಮಿತಿಯು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ
ಬಾಲಸ್ವಾಮಿ ಜಿನ್ನಾಪುರ ಜಿಲ್ಲಾಧ್ಯಕ್ಷರು ದಲಿತ ಸಂರಕ್ಷ ಸಮಿತಿ ರಾಯಚೂರು, ತುರುಮಂದೆಪ್ಪ ಕಟ್ಟಿಮನಿ ಅಧ್ಯಕ್ಷರು ದಲಿತ ಸಂರಕ್ಷ ಸಮಿತಿ ಮಸ್ಕಿ, ಮಲ್ಲಪ್ಪ ಗೋನಾಳ ಜಿಲ್ಲಾಧ್ಯಕ್ಷರು ದಲಿತ ಸಂಘರ್ಷ ಸಮಿತಿ ಸಂಯೋಜಕ ಬಣ, ಖಾಸಿಮಪ್ಪ ಡಿ ಮುರಾರಿ ದಲಿತ ಸಂರಕ್ಷ ಸಮಿತಿ ಅಧ್ಯಕ್ಷರು ಮಸ್ಕಿ, ಹುಚ್ ರೆಡ್ಡಿ ಅಧ್ಯಕ್ಷರು ದಲಿತ ಸಂರಕ್ಷಾ ಸಮಿತಿ ಸಂಯೋಜಕ ಬಣ, ನೀಲಕಂಠಪ್ಪ ಛಲವಾದಿ, ವಿನೋದ್ ಕುಮಾರ್ ಛಲವಾದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು