ಬೃಹತ್ ಆಗಿರುವುದರಲ್ಲೇ ನಮ್ಮ ಸಂವಿಧಾನದ ವೈಶಿಷ್ಟ್ಯ ಮತ್ತು ಸೊಬಗು ಅಡಗಿದೆ; ಗುರುರಾಜ್ ಬಿರಾದಾರ

ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ರಾಯಚೂರು,ನವೆಂಬರ್ 28 : ಹತ್ತಾರು ಧರ್ಮ, ಸಾವಿರಾರು ಭಾಷೆ, ನೂರಾರು ಸಂಸ್ಕೃತಿ-ಜನಾಂಗಗಳ ನೆಲೆಬೀಡಾಗಿರುವ ಭಾರತದಂತಹ ಬೃಹತ್ ರಾಷ್ಟ್ರಕ್ಕೆ, ಇವೆಲ್ಲದಕ್ಕೂ ಸ್ಥಾನ-ಮಾನ, ಗೌರವ ಹಾಗೂ ನ್ಯಾಯ ಒದಗಿಸುವ ಸಂಕೀರ್ಣವಾದ ಸಂವಿಧಾನವೇ ಸರಿಹೊಂದುವಂತಹದು. ಇಂತಹ ಸಂವಿಧಾನವನ್ನು ರಚಿಸುವುದು ಸಂವಿಧಾನ ರಚನಾಕಾರರಿಗೆ ಅತ್ಯಂತ ಕಠಿಣ ಮತ್ತು ಸವಾಲಿನ ಸಂಗತಿಯಾಗಿತ್ತು. ಈ ಎಲ್ಲಾ ಸೂಕ್ಷ್ಮಗಳನ್ನು ಅರಿತಿದ್ದ ಅವರು ಹತ್ತು-ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಸ್ಥಳೀಯ ನಂಬಿಕೆ-ಕಾನೂನು-ಕಟ್ಟಲೆಗಳನ್ನು ಸ್ಥೂಲವಾಗಿ ಅರಿತುಕೊಂಡು ಯಾವೊಬ್ಬ ವ್ಯಕ್ತಿ-ಜನಾಂಗದ ಹಕ್ಕುಗಳು ಅಥವಾ ಭಾವನೆಗಳಿಗೆ ಧಕ್ಕೆಯಾಗದಂತೆ ಸಂವಿಧಾನವನ್ನು ಅತ್ಯಂತ ಮುತುವರ್ಜಿಯಿಂದ ರಚಿಸಿದ್ದರ ಫಲವಾಗಿಯೇ 75 ವರ್ಷ ಕಳೆದಿದ್ದರೂ ಭಾರತದಲ್ಲಿ ಅದೇ ಸಂವಿಧಾನವನ್ನು ನೋಡುತ್ತಿರುವುದು. ಇದೇ ನಮ್ಮ ಭಾರತ ಸಂವಿಧಾನದ ವೈಶಿಷ್ಟ್ಯ ಮತ್ತು ಸೊಬಗು ಎಂದು ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಗುರುರಾಜ್ ಬಿರಾದಾರ ಹೇಳಿದರು.

ರಾಯಚೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಶನಿವಾರ ಕೃಷ್ಣ-ತುಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದ ಅವರು, ಮಣ್ಣಿನ ಸಂಸ್ಕೃತಿ-ನಂಬಿಕೆಗಳಿಗೆ ಎಲ್ಲಿಯೂ ಧಕ್ಕೆಯಾಗದಂತೆ ರಚಿತವಾಗಿ, ಕ್ರೀಯಾಶೀಲ ಹಾಗೂ ಕಾಲಕ್ಕೆ ತಕ್ಕಂತೆ ಹೊಂದಾಣಿಕೆಗೆ ಅವಕಾಶ ಕಲ್ಪಿಸಿರುವ ಸಂವಿಧಾನ ನಮ್ಮ ಹೆಮ್ಮೆ. ಇಂದು ದೇಶದ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ನೀಡುವ ಜೊತೆಗೆ ಸಮಾನತೆಯನ್ನು ಸಾರಿದ ಇಂತಹ ಸಂವಿಧಾನವನ್ನು ಅಂಗೀಕರಿಸಿದ ಸ್ಮರಣೀಯ ದಿನವಾಗಿದೆ ಎಂದು ಹೇಳಿದರು.

ವಿಶ್ವದಲ್ಲಿ ಎಷ್ಟೇ ಶ್ರೇಷ್ಠ ಸಂವಿಧಾನವಿರಲಿ, ಅದರ ಯಶಸ್ಸು ಅಡಗಿರುವುದು ದೇಶವನ್ನು ನಡೆಸುವ ಆಡಳಿತಗಾರರ ಮೇಲೆ ಎಂದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಅತ್ಯಂತ ಸೂಕ್ಷ್ಮವಾದ ಸಂದೇಶವನ್ನು ನಮಗೆ ನೀಡಿದ್ದರು. ನಾವು ಸಂವಿಧಾನವನ್ನು ರಕ್ಷಿಸುವವರ ಬದಲಾಗಿ, ಬಣ್ಣದ ಮಾತು-ಕೃತಿಗಳಿಗೆ ಮರುಳಾಗಿ ಸ್ವಾರ್ಥಪರ-ಭ್ರಷ್ಟರಿಗೆ ಮತ ಹಾಕುತ್ತಿರುವುದರ ಫಲವಾಗಿಯೇ ನಾವಿಂದು ಹಿಂದುಳಿಯುತ್ತಿರಲು, ವಿಫಲತೆಗಳನ್ನು ಅನುಭವಿಸುತ್ತಿರಲು ಕಾರಣ. ವಜ್ರದಂತಹ ಸಂವಿಧಾನವನ್ನು ಭ್ರಷ್ಟರೂಪದ ಕಬಾಡಿಗಳ ಕೈಗೆ ಕೊಟ್ಟರೆ ಅದಕ್ಕವರು ಗಾಜಿನ ಬೆಲೆಯೇ ಕಟ್ಟುವುದು. ಹಾಗಾಗಿ ನಾವಿಂದು ದೂರಬೇಕಾಗಿರುವುದು ರಾಜಕಾರಣಿಗಳ ವೈಫಲ್ಯವನ್ನೇ ಹೊರತು ಸಂವಿಧಾನವನ್ನಲ್ಲ ಎಂದು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಚರಣ್ರಾಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಸಂವಿಧಾನದ ಸಾರಾಂಶ ಸಾರುವ ಪೂರ್ವಪೀಠಿಕೆಯನ್ನು ಬೋಧಿಸುವ ಮೂಲಕ ಪ್ರತಿಜ್ಞಾವಿಧಿಯನ್ನು ಕೈಗೊಳ್ಳಲಾಯಿತು. ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಎಸ್.ಪಾರ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ನಾಗವೇಣಿ ವಿಜಯ್ ಸರೋದೆ ನಿರೂಪಿಸಿದರು ಮತ್ತು ಉಪನ್ಯಾಸಕರಾದ ಡಾ.ಚನ್ನಬಸವ ಪಾಟೀಲ್ ಸ್ವಾಗತಿಸಿದರು ಹಾಗೂ ವೀರೇಶ್ ಗಬ್ಬೂರ್ ವಂದಿಸಿದರು. ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post