UDAYAVANI NEWS
ರಾಯಚೂರು, ಜನವರಿ 14 : ರೈತರು ಬೆಳೆದ ಹತ್ತಿಯ ಗುಣಮಟ್ಟಕನುಸಾರವಾಗಿ ಹತ್ತಿಗೆ ಗರಿಷ್ಠ ೯.೫೦೦ರೂ. ಬೆಲೆಯನ್ನು ನಿಗದಿಪಡಿಸಬೇಕು ಹಾಗೂ ಹತ್ತಿ ಬೆಲೆಯನ್ನು ಏಕಾಏಕಿ ಕಡಿತಗೊಳಿಸುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹತ್ತಿ ಗಿರಣಿ ಮಾಲೀಕರಿಗೆ ತಿಳಿಸಿದರು.
ಅವರು (ಶುಕ್ರವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹತ್ತಿ ಗಿರಣಿ ಮಾಲೀಕರು, ರೈತಪರ ಸಂಘಟನೆಗಳು, ಅಧಿಕಾರಿಗಳು ಹಾಗೂ ರೈತರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹತ್ತಿ ಬೆಳೆದ ರೈತರು ಹತ್ತಿಯನ್ನು ಮಾರುಕಟ್ಟೆಗೆ ಮಾರಾಟಕ್ಕಾಗಿ ತಂದಾಗ ಮಿಲ್‌ಗಳಲ್ಲಿ ಸೂಟ್ ಮುರಿಯುದು, ಹತ್ತಿ ಬೆಲೆಯಲ್ಲಿ ಏಕಾಏಕಿ ಕಡಿತಗೊಳಿಸುವುದು ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರಿಗೆ ಈ ಸಮಸ್ಯೆಗಳು ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಅದಲ್ಲದೇ ಎಪಿಎಂಸಿ ಮಾರುಕಟ್ಟೆಯಿಂದ ಹತ್ತಿ ಬೆಲೆ ಏಕಾಏಕಿ ಇಳಿಕೆಯಾಗುತ್ತಿರುವ ಬಗ್ಗೆ ರೈತರು ಹೇಳುತ್ತಿದ್ದು, ಈ ಬಗ್ಗೆ ಗಮನಹರಿಸಿ ಬೆಲೆಯನ್ನು ಸ್ಥಿರವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು. ರಾಯಚೂರು ಗ್ರಾಮೀಣ ಹಾಗೂ ಮಾನವಿ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಹತ್ತಿ ಬೆಳೆಯನ್ನು ಬೆಳೆಯಲಾಗುತ್ತದೆ ಈ ಭಾಗದ ರೈತರು ಹತ್ತಿ ಬೀಜ ಖರೀದಿಸಿದಾಗ ಕಳಪೆ ಬೀಜಗಳು ಕಂಡುಬರುತ್ತಿದ್ದು ಈ ಬಗ್ಗೆ ಸಂಭಂದಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬೀಜಗಳ ಸ್ಯಾಂಪಲ್‌ಗಳನ್ನು ಮೊದಲು ಕೃಷಿ ಸಂಶೋದನಾ ಕೇಂದ್ರಕ್ಕೆ ಕಳುಹಿಸಿ ನಂತರ ರೈತರಿಗೆ ಮಾರಾಟ ಮಾಡುವಂತೆ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಬೀಜದಲ್ಲಿ ಯಾವುದೇ ಲೋಪದೋಷಗಳಾಗದಂತೆ ಲೋಪದೋಷಗಳು ಕಂಡು ಬಂದಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಚ್ಯುತ್ ರೆಡ್ಡಿ, ಉಪಾಧ್ಯಕ್ಷ ಬಂಗಿ ನರಸರೆಡ್ಡಿ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ, ಹತ್ತಿ ಗಿರಣಿ ಮಾಲಿಕರಾದ ಲಕ್ಷ್ಮೀರೆಡ್ಡಿ, ನಾಗನಗೌಡ ಹರವಿ, ರೈತಪರ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ವಿ ದಿವಾಕರ್, ಮಲ್ಲನಗೌಡ, ಕಾರ್ತಿಕ, ದುರ್ಗಣ್ಣ, ಎನ್.ಎಸ್ ವಿರೇಶ, ಸಿ.ಮಹೇಶ, ಕೆ.ಜಿ ವಿರೇಶ, ರೈತರಾದ ಮಲ್ಲಿಕಾರ್ಜುನ ಗೌಡ, ಶೇಖರರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು