ಕಾರ್ಯನಿರತ ಪತ್ರಕರ್ತರ ಸಂಘದ ಪೂರ್ವಭಾವಿ ಸಭೆ:ರಾಜ್ಯ ಪತ್ರಕರ್ತರ ಸಮ್ಮೇಳನ ಯಶಸ್ಸಿಗೆ ಸಿದ್ಧತೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮುದ್ದೇಬಿಹಾಳ,ಡಿಸೆಂಬರ್ 05 : ಡಿಸೆಂಬರ್ 23, 24 ರಂದು ವಿಜಯಪುರ ನಗರದ ಶ್ರೀ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿ, ಸಮ್ಮೇಳನದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲೂ ಸಕ್ರಿಯಾಗಿ ಭಾಗವಹಿಸುವ ಕುರಿತು ಮುದ್ದೇಬಿಹಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ತೀರ್ಮಾನಿಸಿದರು.
 ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ನೇತೃತ್ವದಲ್ಲಿ ಸಮ್ಮೇಳನ ಪೂರ್ವಭಾವಿ ಸಭೆ ನಡೆಸಿದ ಸರ್ವ ಸದಸ್ಯರು, ಈಗಾಗಲೇ ಸಮ್ಮೇಳನದ ತಯಾರಿಗಳು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮತ್ತು ರಾಜ್ಯದ ಎಲ್ಲ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ಭರದಿಂದ ನಡೆಸಿದ್ದಾರೆ. ಜಿಲ್ಲಾ ಘಟಕದವರು ಯಾವುದೇ ಜವಾಬ್ಧಾರಿ ಕೊಟ್ಟರೂ ನಡೆಸಿಕೊಡಲು ಸಿದ್ದರಾಗಿರುವುದಾಗಿ ವಾಗ್ಧಾನ ಮಾಡಿದರು.
 ಸಮ್ಮೇಳನವನ್ನು ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸುವರು. ಹಲವು ಸಚಿವರು, ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ನಾಡಿನ ಹೆಸರಾಂತ ಪತ್ರಕರ್ತರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮ್ಮೇಳನದಲ್ಲಿ ಸಂಘದ ವತಿಯಿಂದ ವಿವಿಧ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಉಪಯುಕ್ತ ಗೋಷ್ಠಿಗಳನ್ನು ಏರ್ಪಡಿಸಲಾಗುತ್ತದೆ ಎಂದು ರಾಜ್ಯ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಅವರು ಸಭೆಗೆ ತಿಳಿಸಿದರು.
 ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಎಲ್.ಮುಲ್ಲಾ ಮಾತನಾಡಿ ಮುದ್ದೇಬಿಹಾಳದಲ್ಲಿ 2000ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಸಂಘಟಿಸಿದ್ದನ್ನು ನೆನಪಿಸಿಕೊಂಡು ಜಿಲ್ಲೆಯ ಹಿರಿಯ ಪತ್ರಕರ್ತರ ಅನುಭವ, ಸಾಮಥ್ರ್ಯ ಮತ್ತು ಯುವ ಪತ್ರಕರ್ತರ ಕ್ರಿಯಾಶೀಲತೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಘಟಕದವರು ಹಲವು ರೀತಿಯ ಚಟುವಟಿಕೆಗಳನ್ನು ನಡೆಸತೊಡಗಿದ್ದಾರೆ. ಜಿಲ್ಲಾ ಘಟಕದ ಪದಾಧಿಕಾರಿಗಳು ನಮ್ಮ ತಾಲೂಕಿಗೆ ಪೂರ್ವಭಾವಿ ಸಭೆ ನಡೆಸಲು ಬಂದಾಗ ಎಲ್ಲರೂ ಪಾಲ್ಗೊಂಡು ಅವರಿಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
 ಸಂಘದ ತಾಲೂಕು ಅಧ್ಯಕ್ಷ ಮುತ್ತು ವಡವಡಗಿ ಮಾತನಾಡಿ ಪತ್ರಕರ್ತರ ಸಂಘಟನೆಗಳ ವಿಷಯದಲ್ಲಿ ರಾಜಕಾರಣಿಗಳು, ಸಂಘ ಸಂಸ್ಥೆಗಳ ಮುಖಂಡರು, ಗಣ್ಯರು, ಸಾರ್ವಜನಿಕರು ಗೊಂದಲಕ್ಕೊಳಗಾಗಬಾರದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 1937ರಲ್ಲಿ ಡಾ| ಡಿ.ವಿ.ಗುಂಡಪ್ಪ ಅವರಿಂದ ಸ್ಥಾಪನೆಗೊಂಡಿರುವ ರಾಜ್ಯದ ಏಕೈಕ ಪತ್ರಕರ್ತರ ಬೃಹತ್ ಸಂಘಟನೆಯಾಗಿದೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಕೋವಿಡ್ ಸಂದರ್ಭ ಮರಣಹೊಂದಿದ ಅನೇಕ ಪತ್ರಕರ್ತರ ಕುಟುಂಬಗಳಿಗೆ ಸರ್ಕಾರದಿಂದ ಸಹಾಯ ಧನ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿರುವುದು ನಮ್ಮ ಕಣ್ಣೆದುರಿಗೆ ಇದೆ. ನಮ್ಮ ಸಂಘದ ಸದಸ್ಯರಲ್ಲದ ಬೇರೆ ಯಾರಾದರೂ ಕಾರ್ಯನಿರತ ಪತ್ರಕರ್ತರ ಸಂಘದವರು ಎಂದು ಹೇಳಿಕೊಂಡು ಬಂದಲ್ಲಿ ಅದನ್ನು ಪರಾಮರ್ಶಿಸದೆ ನಂಬಬಾರದು ಎಂದು ಕಿವಿಮಾತು ಹೇಳಿದರು.
 ಸಂಘದ ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ಪ್ರೊ| ರವಿಂದ್ರ ನಂದೆಪ್ಪನವರ್, ಖಜಾಂಚಿ ಲಾಳೇಮಶ್ಯಾಕ ನದಾಫ, ಕಾರ್ಯದರ್ಶಿ ಕಾಶಿನಾಥ ಬಿರಾದಾರ ನಾಲತವಾಡ, ಸಲಹಾ ಸಮಿತಿಯ ಪದಾಧಿಕಾರಿಗಳಾದ ಮಹಿಬೂಬ ಹಳ್ಳೂರ ನಾಲತವಾಡ, ಪರಶುರಾಮ ಕೊಣ್ಣೂರ, ಶಿವಕುಮಾರ ಶಾರದಳ್ಳಿ, ಬಸವರಾಜ ಹುಲಗಣ್ಣಿ, ಬಂದೇನವಾಜ ಕುಮಸಿ, ಸಾಗರ ಉಕ್ಕಲಿ, ಸದಸ್ಯರಾದ ಚೇತನ ಶಿವಶಿಂಪಿ, ಪುಂಡಲಿಕ ಮುರಾಳ, ಮಕ್ಬುಲ್ ಬನ್ನೆಟ್ಟಿ, ಮುತ್ತು ಬೀರಗೊಂಡ ಢವಳಗಿ, ಹಣಮಂತ ಬೀರಗೊಂಡ ಢವಳಗಿ, ಮುತ್ತು ಟಕ್ಕಳಕಿ, ಪ್ರೊ| ಉಮರ ಹಾಲ್ಯಾಳ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು. 

Post a Comment

Previous Post Next Post