UDAYAVANI NEWS
ಮಸ್ಕಿ, ಮಾರ್ಚ್ 15 : ತಾಲೂಕಿನ ಅಂಕುಶದೊಡ್ಡಿ, ಉದ್ಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಪ್ರಕಾಶ್ ವಿ. ಅವರು ಪರಿಶೀಲಿಸಿದರು.
ಅಂಕುಶದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಭೋಜನಾಲಯ, ಆಟದ ಮೈದಾನ, ಶಾಲಾ ಕಂಪೌಂಡ್ ವೀಕ್ಷಿಸಿದರು. ಅನುದಾನ ಬಳಕೆ ಕುರಿತು ಗ್ರಾಪಂ ಸದಸ್ಯರಿಂದ ಮಾಹಿತಿ ಪಡೆದರು. ತದ ನಂತರ ಉದ್ಬಾಳ ಪ್ರೌಢ ಶಾಲೆಗೆ ಭೇಟಿ ನೀಡಿ ಡಿಜಿಟಲ್ ತರಗತಿ, ವಿದ್ಯಾರ್ಥಿಗಳ ಸಂಖ್ಯೆ, ವಿಷಯವಾರು ಶಿಕ್ಷಕರ ಕುರಿತು ಮಾಹಿತಿ ಪಡೆದರು. ಶುದ್ಧ ಕುಡಿಯುವ ನೀರಿನ ಲಭ್ಯತೆ, ಮಧ್ಯಾಹ್ನದ ಬಿಸಿಯೂಟ, ಶೌಚಾಲಯ ಬಳಕೆ, ಕ್ರೀಡಾ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಉದ್ಬಾಳ ಗ್ರಾಪಂಯಲ್ಲಿ ಅಳವಡಿಸಿರುವ ಜಿಪಂಯಿಂದ ಸರಬರಾಜು ಮಾಡಿದ ಕಿಯೋಸ್ಕ್ ಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ಗೀತೆಗಳನ್ನು ಪ್ರಸಾರ ಮಾಡುವ ಕುರಿತು ಪರಿಶೀಲಿಸಿದರು.
ಈ ವೇಳೆ ಮಸ್ಕಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪವನ್ ಕುಮಾರ್, ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ, ಅಂಕುಶದೊಡ್ಡಿ ಗ್ರಾಪಂ ಪಿಡಿಒ ಸುರೇಶ್ ಪಾಟೀಲ್, ಉದ್ಬಾಳ ಗ್ರಾಪಂ ಪಿಡಿಒ ಬಸವರಾಜ್, ತಾಂತ್ರಿಕ ಸಹಾಯಕ ಅಭಿಯಂತರರಾದ ಸೋಮಶೇಖರ್, ಟಿಐಇಸಿ ಸತೀಶ್, ಬಿಎಫ್ಟಿ ಬೀರಪ್ಪ, ಡಿಇಒ ಬಲವೇಂದ್ರ ಇತರರಿದ್ದರು.
Tags
ಜಿಲ್ಲಾ ಸುದ್ದಿಗಳು