ಜೈನ ತೀರ್ಥಂಕರ ವಿಗ್ರಹ ಕಳವಿಗೆ ಯತ್ನ: ಪ್ರಕರಣ ದಾಖಲು



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಚಿತ್ತಾಪುರ, ಫೆಬ್ರುವರಿ 21 : ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಪುರಾತನ ನಾಗಾವಿ ಮಹಾಅಗ್ರಹಾರದಲ್ಲಿ ಜೈನ ತೀರ್ಥಂಕರ ವಿಗ್ರಹ ಕಳ್ಳತನಕ್ಕೆ ಪ್ರಯತ್ನ ಮಾಡಿರುವ ಪ್ರಕರಣ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪ್ರಕರಣ ಜರುಗಿದೆ.

ಕರ್ನಾಟ ರಾಜ್ಯ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಡುವ ಹಾಳು ಹಂಪೆಯಂತಿರುವ ನಾಗಾವಿಯಲ್ಲಿ ಪುರಾತನ ಜೈನ ಮಂದಿರವಿದೆ. ಮಂದಿರದೊಳಗೆ ಕಪ್ಪು ಶಿಲೆಯಲ್ಲಿ ನಿರ್ಮಿಸಿರುವ ನಿಂತ ಭಂಗಿಯಲ್ಲಿರುವ ಜೈನ ತೀರ್ಥಂಕರ (ಪಾರ್ಶ್ವನಾಥ) ಸುಂದರ ವಿಗ್ರಹವಿದೆ. ಅದನ್ನೆ ಕಳ್ಳತನ ಮಾಡಲು ದುಷ್ಕರ್ಮಿಗಳಿಂದ ವಿಫಲ ಪ್ರಯತ್ನ ಮಾಡಲಾಗಿದೆ.
ತೀರ್ಥಂಕರರ ವಿಗ್ರಹವನ್ನು ಮಂದಿರದೊಳಗಿಂದ ಹೊರಗೆ ತಂದು ಕಳವು ಮಾಡಲು ಪ್ರಯತ್ನಿಸಲಾಗಿದೆ. ಶನಿವಾರ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಹಾಳೂರು ನಾಗಾವಿಯ ಅಗಸಿ ಬಾಗಿಲ ಹತ್ತಿರ ಪುರಾತತ್ವ ಇಲಾಖೆಯಿಂದ ನೇಮಕಗೊಂಡಿರುವ ಕಾವಲುಗಾರ ಹೋಗುತ್ತಿರುವಾಗ ಅಲ್ಲಿ ನಾಲ್ವರು ಅಪರಿಚಿತರು ಕಂಡುಬಂದಿದ್ದಾರೆ. ಅವರನ್ನು ವಿಚಾರಿಸಿದಾಗ ಹೈದರಾಬಾದ್ ಮತ್ತು ಸಿಕಂದರಾಬಾದಿನಿಂದ ಕೆಲಸಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ನಾಲ್ವರ ಚಿತ್ರ ಸೆರೆ ಹಿಡಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಾಗಾವಿಯಲ್ಲಿ ಜೈನ ವಿಗ್ರಹ ಕಳ್ಳತನಕ್ಕೆ ಪ್ರಯತ್ನ ಮಾಡಿರುವ ವಿಷಯ ಗೊತ್ತಾಗುತ್ತಿದ್ದಂತೆ ಕಾವಲುಗಾರ ಚಿತ್ತಾಪುರ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದಾರೆ. ಭಾನುವಾರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂಧಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾವಲುಗಾರ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.

ಸೋಮವಾರ ಪುರಾತತ್ವ ಮತ್ತು ಪರಂಪರೆ ವಸ್ತು ಸಂಗ್ರಹಾಲಯಗಳ ಇಲಾಖೆಯ ಸರ್ಕಾರಿ ವಸ್ತು ಸಂಗ್ರಹಾಲಯ ಕಲಬುರಗಿಯ ಎಸ್.ಡಿ.ಎ ಮಹೆಬೂಬ್ ಜಿಲಾನಿ ಅವರು ಚಿತ್ತಾಪುರಕ್ಕೆ ಆಗಮಿಸಿ ಜೈನ್ ತೀರ್ಥಂಕರ ವಿಗ್ರಹ ಕಳುವು ಮಾಡಲು ಪ್ರಯತ್ನಿಸಿರುವ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಠಾಣೆಗೆ ಬಂದಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಸೋಮವಾರ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪಂಚನಾಮೆ ಮಾಡಿದ್ದಾರೆ.

ವಿಶ್ವಹಿಂದು ಪರಿಷತ್ ಪ್ರತಿಭಟನೆ: ಪಟ್ಟಣದ ಹೊರವಲಯದ ನಾಗಾವಿಯಲ್ಲಿರುವ ಪುರಾತನ ಜೈನ ಮಂದಿರದಲ್ಲಿನ ಜೈನ ತೀರ್ಥಂಕರ ವಿಗ್ರಹ ಕಳ್ಳತನಕ್ಕೆ ಪ್ರಯತ್ನಿಸಿದ ಪ್ರಕರಣ ಖಂಡಿಸಿ ಸೋಮವಾರ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗ ದಳ ಕಾರ್ಯಕರ್ತರು ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.

ವಿಗ್ರಹ ಕಳ್ಳತನಕ್ಕೆ ಯತ್ನಿಸಿದ ಪ್ರಕರಣದ ಮಾಹಿತಿ ಸಿಕ್ಕರೂ
ಸಹ ಪ್ರಾಚ್ಯವಸ್ತು ಇಲಾಖೆ ಹಾಗೂ ಗೃಹ ಇಲಾಖೆ ಪ್ರಕರಣ ದಾಖಲಿಸಿ ತಕ್ಷಣ ಕ್ರಮ ಕೈಗೊಂಡಿಲ್ಲ. ನಿಧಿ ಆಸೆ ಮತ್ತು ವಿಗ್ರಹ ಕಳ್ಳತನದ ಪ್ರಯತ್ನ ಪೂರ್ವನಿಯೋಜಿತದಂತೆ ಕಂಡು ಬರುತ್ತಿದೆ ಎಂದು ಪ್ರತಿಭಟನೆಕಾರರು ಆತಂಕ ವ್ಯಕ್ತ ಮಾಡಿದ್ದಾರೆ.

ವಿಗ್ರಹ ಕಳವಿಗೆ ಪ್ರಯತ್ನಿಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದೇವಾಲಯ ಮತ್ತು ಶಿಲ್ಪಕಲಾಕೃತಿಗಳ, ಮೂರ್ತಿಗಳ ರಕ್ಷಣೆಗೆ ಹೆಚ್ಚಿನ ರಕ್ಷಣಾ ವ್ಯವಸ್ಥೆ ಮಾಡಬೇಕು ಎನ್ನುವ ಬೇಡಿಕೆ ಪತ್ರವನ್ನು ಸ್ಥಳೀಯ ತಹಶೀಲ್ದಾರ್ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಅಮಿತ್ ಕುಲಕರ್ಣಿ ಅವರಿಗೆ ಸಲ್ಲಿಸಲಾಯಿತು.

Post a Comment

Previous Post Next Post