ಸತತ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶೆ‌ ಹುದ್ದೆಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಎನ್. ಗಾಯತ್ರಿ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS
ಕೋಲಾರ,ಜನವರಿ 16 : ಜಿಲ್ಲೆಯ ಬಂಗಾರ ಪೇಟೆಯ ತಾಲೂಕಿನ ಕಾರಹಳ್ಳಿಯ ಗಾಯತ್ರಿ  ಅವರು 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ. ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶೆ‌ ಹುದ್ದೆಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಕರ್ನಾಟಕ ಉಚ್ಚ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು  ತಳವರ್ಗದ ಎನ್. ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ.
ಅತ್ಯಂತ ತಳಸಮುದಾಯ ಮತ್ತು ಬಡತನದ ಹಿನ್ನೆಲೆಯಿಂದ ಬಂದ ಗಾಯತ್ರಿ  ಅವರು ಬಂಗಾರಪೇಟೆಯ ಕಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಕೆಜಿಎಫ್‌ ನ ಕೆಂಗಲ್‌ ಹನುಮಂತಯ್ಯ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದು ಕರ್ನಾಟಕಕ್ಕೆ 4ನೇ ರ‍್ಯಾಂಕ್ ಬರುವ ಮೂಲಕ ಪಡೆದುಕೊಂಡಿದ್ದಾರೆ.

ನಾರಾಯಣಸ್ವಾಮಿ, ವೆಂಕಟಲಕ್ಷ್ಮೀ ಅವರ ಒಬ್ಬಳೇ ಮಗಳು. ಮೂವರು ಸಹೋದರರಿದ್ದಾರೆ. ತೀರಾ ಬಡತನದಲ್ಲಿ ಬೆಳೆದ ಗಾಯತ್ರಿ ಮೊದಲಿನಿಂದಲೂ ಸಾಮಾಜಿಕ ಕಾಳಜಿ, ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರು. ಇದೀಗ ಯಶಸ್ವಿಯಾಗಿದ್ದು, ತಂದೆ, ತಾಯಿ, ಸಹಪಾಠಿಗಳು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

UDAYAVANI NEWS ಜೊತೆ ಮಾತನಾಡಿದ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವ ಗಾಯತ್ರಿ ಅವರು, "ಎರಡನೇ ಪ್ರಯತ್ನದಲ್ಲಿ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ. ನನಗಿಂತ ನಮ್ಮ  ಕುಟುಂಬಸ್ಥರು ಖುಷಿಗೊಂಡಿದ್ದಾರೆ" ಎಂದು ಸಂತಸ ಹಂಚಿಕೊಂಡರು.
ಅಂಬೇಡ್ಕರ್‌ ಸ್ಫೂರ್ತಿ

"ನಮ್ಮ ಮನೆಯಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲ ಮಹಿಳೆ ನಾನು. ಸರ್ಕಾರಿ ನೌಕರಿ ಪಡೆದುಕೊಂಡದ್ದು, ಅದರಲ್ಲೂ ಸಿವಿಲ್‌ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವುದರಲ್ಲಿ ಮೊದಲಿಗಳು. ತಳ ಸಮುದಾಯಗಳ ತಲ್ಲಣಗಳಿಗೆ ಮಿಡಿಯಲು ಪ್ರಯತ್ನಿಸುತ್ತೇನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನನ್ನ ಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ನನ್ನೆಲ್ಲ ಸಾಧನೆಗೆ ಅಂಬೇಡ್ಕರ್‌ ಅವರು ಸ್ಫೂರ್ತಿಯಾಗಿದ್ದು, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವೆ" ಎಂದು ಹೇಳಿದರು.




Post a Comment

Previous Post Next Post