ಹೇಮಾವತಿ ಕಾಮಗಾರಿಗಳಲ್ಲಿ 500 ಕೋಟಿ ಲೂಟಿ : ಇದು 40% ಅಲ್ಲ, 60% ಭ್ರಷ್ಟಾಚಾರ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಬೆಂಗಳೂರು, ಡಿಸೆಂಬರ್ 17 : ಇದು ಬೃಹತ್‌ ನೀರಾವರಿ ಇಲಾಖೆಯಲ್ಲಿ ನಡೆದ ಬೃಹತ್‌ ಹಗರಣ. ಹೇಮಾವತಿ ಎಡದಂಡೆ ಕಾಲುವೆ ಮತ್ತು ಆ ವ್ಯಾಪ್ತಿಯ ಇತರ ಕಾಮಗಾರಿಗಳಲ್ಲಿ 60% ಭ್ರಷ್ಟಾಚಾರ ನಡೆದಿರುವುದು ನಿಚ್ಚಳವಾಗಿದೆ. ಭ್ರಷ್ಟ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಲು ಹೋಗಿ ಇನ್ನಷ್ಟು ತಪ್ಪುಗಳನ್ನು ಎಸಗಿದ್ದು, ಇದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳು ಈ ದಿನ.ಕಾಮ್‌ಗೆ ದೊರೆತಿವೆ. ಹೇಮಾವತಿ ಕಾಮಗಾರಿಗಳಲ್ಲಿ ಸಾರ್ವಜನಿಕರ ಹಣದ ಲೂಟಿ ಕುರಿತಾದ ಮೊದಲ ಭಾಗ ಇಲ್ಲಿದೆ.

ರಾಜ್ಯದ ಸರ್ಕಾರಿ ಕಾಮಗಾರಿಗಳಲ್ಲಿ 40% ಭ್ರಷ್ಟಾಚಾರದ ಕುರಿತಂತೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ 60% ಭ್ರಷ್ಟಾಚಾರದ ದೊಡ್ಡ ಹಗರಣವನ್ನು ಬಿಚ್ಚಿಡುವ ದಾಖಲೆಗಳು ಈದಿನ.ಕಾಮ್‌ಗೆ ಲಭಿಸಿವೆ. ಬೃಹತ್‌ ಮತ್ತು ಮಧ್ಯಮ ನೀರಾವರಿ ಇಲಾಖೆಯಡಿ ನಡೆದ ಸಾವಿರಾರು ಕೋಟಿ ರೂ.ಗಳ ಕಾಮಗಾರಿಯ ಹಗರಣವಿದು. ಈದಿನ.ಕಾಮ್‌ನ ತಂಡ ಹೇಮಾವತಿಯಿಂದ ನೀರಾವರಿಯಾಗಿರುವ ಪ್ರದೇಶಕ್ಕೆ ಖುದ್ದು ಹೋಗಿ ಚಿತ್ರೀಕರಣ ನಡೆಸಿದಾಗ ಕಂಡುಬಂದ ಸಂಗತಿಗಳು ಅಚ್ಚರಿಯನ್ನೂ, ಆಘಾತವನ್ನೂ ಮೂಡಿಸುವಂತಿವೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆದು, ಸಂಬಂಧಪಟ್ಟವರಿಗೆ ಶಿಕ್ಷೆಯಾಗದಿದ್ದರೆ, ಬೃಹತ್ ನೀರಾವರಿ ಇಲಾಖೆಯು ಇನ್ನೂ ಸಾಕಷ್ಟು ಕಾಲ ರಾಜ್ಯದ ಬೊಕ್ಕಸಕ್ಕೆ ಮಾಡುವ ಹಾನಿ ಅಷ್ಟಿಷ್ಟಲ್ಲ.
ಈ ಹಗರಣದಲ್ಲಿ 883 ಕೋಟಿ ರೂ.ಗಳ (ಕಾಮಗಾರಿ ಮುಗಿಯುವ ಹೊತ್ತಿಗೆ ಇದು 1,012 ಕೋಟಿ ರೂ.ಗಳನ್ನು ದಾಟಿತು) ಹೇಮಾವತಿ ಎಡದಂಡೆ ಕಾಲುವೆ ಆಧುನೀಕರಣದ್ದೇ ಪ್ರಧಾನವಾದರೂ, ಇದೇ ವ್ಯಾಪ್ತಿಯ ಗೂಡೆಹೊಸಳ್ಳಿ ಏತ ನೀರಾವರಿ ಮತ್ತು ಕೆರೆ ಕಾಮಗಾರಿಗಳಲ್ಲೂ ಅಕ್ರಮಗಳು ಸಾಕಷ್ಟು ನಡೆದಿವೆ. ಹೇಮಾವತಿ ಎಡದಂಡೆ ಕಾಲುವೆಯ ಗುತ್ತಿಗೆಯನ್ನು ಕಾಂಗ್ರೆಸ್ ಸರ್ಕಾರ ಇದ್ದಾಗಲೇ ನೀಡಲಾಯಿತಾದರೂ, ಹೆಚ್ಚಿನ ಅಕ್ರಮಗಳು ಕಣ್ಣಿಗೆ ರಾಚುವುದು 2019-20ರಲ್ಲಿ. ದುರಂತವೆಂದರೆ, ಈ ಅಕ್ರಮಗಳು ಅತ್ಯಂತ ಹೆಚ್ಚು ನಡೆದಿರುವುದು ಸಾಕ್ಷಾತ್ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಂತ ತಾಲೂಕು ಕೆ.ಆರ್.ಪೇಟೆಯಲ್ಲಿ. 26.7.2019ರಿಂದ 7.2.2020ರ ಅವಧಿಯಲ್ಲಿ ಸದರಿ ಇಲಾಖೆ ಮುಖ್ಯಮಂತ್ರಿಯವರ ಅಧೀನದಲ್ಲೇ ಇತ್ತು!!

ರೈತಸಂಘದ ಕಾರ್ಯಕರ್ತರೊಬ್ಬರು ಈ ಕುರಿತಂತೆ ದೂರು ದಾಖಲಿಸಿದರೂ, ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ನಮ್ಮ ತಂಡವು ದಾಖಲೆಗಳ ಅಧ್ಯಯನಕ್ಕೆ ಮುಂದಾಯಿತು. ಕೂಲಂಕಷ ಪರಿಶೀಲನೆಯ ನಂತರ ಖುದ್ದಾಗಿ ಕಾಮಗಾರಿಯ ಪ್ರದೇಶಕ್ಕೆ ಭೇಟಿ ನೀಡಿತು. ಸುಮಾರು ಒಂದು ತಿಂಗಳ ಕಾಲ ನಡೆಸಿದ ಈ ಅಧ್ಯಯನದ ನಂತರ ಎಲ್ಲ ದಾಖಲೆಗಳನ್ನು ಮತ್ತು ಖುದ್ದು ಕಂಡ ಸಂಗತಿಗಳನ್ನು ರಾಜ್ಯದ ಜನತೆಯ ಮುಂದೆ ಇಡುವುದು ನಮ್ಮ ಕರ್ತವ್ಯವೆನಿಸಿದೆ.
ದಾಖಲೆ-ದಸ್ತಾವೇಜುಗಳೇ ಮಾತಾಡುವ ಈ ಅಕ್ರಮ ನಡೆದಿರುವುದು ಪ್ರಧಾನವಾಗಿ ಮೂರು ಕಾಮಗಾರಿಗಳಲ್ಲಿ. 1. ಸಾವಿರ ಕೋಟಿ ರೂ.ಗಳನ್ನು ಸರ್ಕಾರದ ಬೊಕ್ಕಸದಿಂದ ಪಡೆದಿರುವ ಹೇಮಾವತಿ ಎಡದಂಡೆ ನಾಲೆ ಆಧುನೀಕರಣ. 2. ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆ ಹಾಗೂ 3. ಕೆಟಿಪಿಪಿ ಕಾಯ್ದೆಯ 4(ಎ) ಅಡಿಯಲ್ಲಿ ವಿನಾಯ್ತಿ ಪಡೆದು ಕೈಗೊಂಡಿರುವ ಮೂರು ಪ್ರಮುಖ ಕೆರೆಗಳು ಮತ್ತು ಏಳು ಇತರ ಕಾಮಗಾರಿಗಳು.

ಈ ಸಾವಿರಾರು ಕೋಟಿ ರೂ.ಗಳ ಹಗರಣದ ದಾಖಲೆಗಳನ್ನು ಇಂದಿನಿಂದ ಹಂತ ಹಂತವಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಾ ಹೋಗಲಿದ್ದೇವೆ. ಮೊದಲಿಗೆ ʼಸಣ್ಣʼ ಹಗರಣದಿಂದ ಆರಂಭಿಸೋಣ.

ಹೇಮಾವತಿ ಹಗರಣ ಭಾಗ 1:
ಲಾಕ್‌ಡೌನ್‌ ಸಮಯದಲ್ಲೇ ನಡೆಸಿದ ಕೋಟಿ ಕೋಟಿ ಅವ್ಯವಹಾರ: ಉಪಚುನಾವಣೆಯ ಸುತ್ತಮುತ್ತ ಅನುಮಾನಾಸ್ಪದ ಕಾಮಗಾರಿಗಳು

2019ರ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಕೆ.ಆರ್.ಪೇಟೆ ತಾಲೂಕಿನ ಹಲವಾರು ಕೆರೆಗಳು ತುಂಬಿ ಹರಿದಿದ್ದವು. ಕೆಲವು ಕೆರೆಗಳು ಒಡೆದು ಭಾರೀ ನಷ್ಟಕ್ಕೂ ಕಾರಣವಾಗಿದ್ದವು. ಕೆರೆಗಳು ಒಡೆದು ತಾಲೂಕಿನ ರೈತರು ನಷ್ಟಕ್ಕೆ ಸಿಲುಕಿ ಕಂಗಾಲಾಗುತ್ತಾರೆ. ಆದರೆ ಅವರ ಕಣ್ಣೀರನ್ನೇ ಬಂಡವಾಳ ಮಾಡಿಕೊಂಡು ಭಾರೀ ಲಾಭ ಗಳಿಸಲು ಕೆಲವರು ಹೊಂಚು ಹಾಕುತ್ತಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕೋಟ್ಯಂತರ ರೂ. ಹಣವನ್ನು ಲೂಟಿ ಮಾಡಿದ್ದಕ್ಕೆ ಕಾಗದ ಪತ್ರಗಳು ಸಾಕ್ಷ್ಯ ನುಡಿಯುತ್ತವೆ. ಆ ಲೂಟಿಯಲ್ಲಿ ಹೇಮಾವತಿ ಎಡದಂಡೆ ನಾಲಾ ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದನ್ನು ದಾಖಲೆಗಳು ಬಯಲು ಮಾಡಿವೆ. ಹಗರಣಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಈದಿನ.ಕಾಮ್ ಕಲೆ ಹಾಕಿದೆ.

2019ರ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಹರಳಹಳ್ಳಿ ಕೆರೆಗೆ ಎದ್ದು ಕಾಣುವ ಅಪಾಯ ಆಗಿದ್ದದ್ದು ವಾಸ್ತವ. ಇದನ್ನೇ ನೆಪವಾಗಿಟ್ಟುಕೊಂಡ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಾನಾ ಕಾಮಗಾರಿಗಳನ್ನು ಹೊಸೆದಿದ್ದಾರೆ. ಈ ವಿಚಾರದಲ್ಲಿ ದೂರು ನೀಡಿರುವ ರೈತಸಂಘದ ಕಾರ್ಯಕರ್ತ ನಾಗೇಗೌಡರ ಪ್ರಕಾರ ʼಹೊಸಹೊಳಲು ದೊಡ್ಡ ಕೆರೆ ಹಾಗೂ ಸಿಂಧಘಟ್ಟ ಕೆರೆಗಳಿಗೆ ಅಂತಹ ಯಾವ ದೊಡ್ಡ ಡ್ಯಾಮೇಜೂ ಆಗಿರಲಿಲ್ಲʼ. ತುರ್ತು ಕಾಮಗಾರಿಯ ಹೆಸರಿನಲ್ಲಿ ಟೆಂಡರ್ ಪ್ರಕ್ರಿಯೆಯನ್ನೂ ನಡೆಸದೇ ಕಾಮಗಾರಿ ಕೈಗೆತ್ತಿಕೊಂಡು, ಒಂದಷ್ಟು ತೇಪೆ ಕೆಲಸ ಮಾಡಿ, ಕೋಟ್ಯಂತರ ಹಣ ದೋಚಲಾಗಿದೆ. 

ತುರ್ತು ಎಂದು ಕೆಟಿಪಿಪಿ ಆಕ್ಟ್‌ನಿಂದ ವಿನಾಯಿತಿ, ಐದು ತಿಂಗಳ ವಿಳಂಬದ ನಂತರ ಕಾಮಗಾರಿ 

2019ರ ಅಕ್ಟೋಬರ್‌ನಲ್ಲಾದ ಅತಿವೃಷ್ಟಿ ಸಂಬಂಧ ತುರ್ತು ಕಾಮಗಾರಿಯ ಹೆಸರಿನಲ್ಲಿ ಕೆಟಿಪಿಪಿ ಕಾಯ್ದೆ 4(ಎ) ಅನ್ವಯ ವಿನಾಯಿತಿ ನೀಡಲಾಗಿದೆ. ಕೆಟಿಪಿಪಿ ಕಾಯ್ದೆಯ ನಿಯಮಗಳ ಪ್ರಕಾರ ಒಂದು ಕೋಟಿಗಿಂತ ಹೆಚ್ಚಿನ ಮೌಲ್ಯದ ಕಾಮಗಾರಿಗೆ ಟೆಂಡರ್ ಮತ್ತಿತರ ಪ್ರಕ್ರಿಯೆಯಿಲ್ಲದೇ ಕಾರ್ಯಾದೇಶ ನೀಡಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟವು ಸದರಿ ಕಾಮಗಾರಿಯು ತುರ್ತಾಗಿ ಕೈಗೆತ್ತಿಕೊಳ್ಳಬೇಕಾದುದು ಎಂದು ಟೆಂಡರ್‌ನಿಂದ ವಿನಾಯಿತಿ ನೀಡಬೇಕು. ಆದರೆ, ಇಲ್ಲಿ ಅಕ್ಟೋಬರ್‌ನಲ್ಲಿ ʼಒಡೆದʼ ಕೆರೆ ರಿಪೇರಿಗೆ 2020ರ ಜನವರಿ 28ರಂದು ಸಂಪುಟದ ವಿನಾಯಿತಿ ದೊರಕಿದೆ. ಅಂದರೆ, ಬರೋಬ್ಬರಿ ಮೂರು ತಿಂಗಳ ಬಳಿಕ ಅಧಿಕಾರಿಗಳಿಗೆ ಇದು ತುರ್ತು ಕಾಮಗಾರಿ ಎಂದೆನಿಸಿದೆ. ಹೋಗಲಿ, ಆಗಲೇ ಕೆಲಸವನ್ನು ಕೈಗೆತ್ತಿಕೊಂಡರಾ ಎಂದರೆ ಅದೂ ಇಲ್ಲ. ತಾಂತ್ರಿಕ ಮಂಜೂರಾತಿಯನ್ನು ಮಾರ್ಚ್27ರಂದು ನೀಡಲಾಗಿದೆ. ಐದು ತಿಂಗಳ ನಂತರ ನಡೆಯುವ ಕಾಮಗಾರಿಯನ್ನು ತುರ್ತು ಎಂದು ಹೇಗೆ ಕರೆಯಲು ಬಂದೀತು?

ಈ ಮೂರು ಕೆರೆಗಳ ಕಾಮಗಾರಿಗಳಲ್ಲಿ ಹರಳಹಳ್ಳಿ ಕೆರೆಯ 1.1 ಕೋಟಿ ಕಾಮಗಾರಿಯನ್ನು ಅದೇ ಊರಿನ ಎಚ್.ಎನ್.ಶಿವರಾಮು ಅವರಿಗೂ, ಹೊಸಹೊಳಲು ಕೆರೆಯ 2.7 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಕೆ ಶಿವರಾಮು ಎಂಬುವವರ ಆರ್‌ಕೆಬಿ ಬ್ರದರ್ಸ್, ಇನ್ಸ್ಟ್ರಪೋಪ್ ಪ್ರೊವೆಂಚರ್ ಪ್ರೈವೆಟ್ ಲಿಮಿಟೆಡ್ ಮತ್ತು ಸಿಂಧಘಟ್ಟ ಕೆರೆಯ 2.2 ಕೋಟಿ ಮೊತ್ತದ ಕಾಮಗಾರಿಯನ್ನು ಆರ್ ಚಂದ್ರಮೋಹನ್ ಎಂಬುವವರ ಆರ್‌ಕೆ ಕಾಂಟ್ರಾಕ್ಟ್ಸ್ ಮತ್ತು ಆರ್ಕೆ ಗ್ರಾನೈಟ್ ಪ್ರೈವೆಟ್ ಲಿಮಿಟೆಡ್‌ಗೆ ನೀಡಲಾಗಿದ್ದಂತೆ ಕಾರ್ಯಾದೇಶದ ದಾಖಲೆಗಳು ಹೇಳುತ್ತವೆ.
ಸಿಂಧಘಟ್ಟ ಕೆರೆಯ ಎರಡೂ ಕಡೆಯ ದುರಸ್ತಿ ಮತ್ತು ಬಲಭಾಗದ ಕೋಡಿ ಕಾಸ್‌ವೇ ಪುನರ್‌ನಿರ್ಮಾಣ ಹಾಗೂ ಕೋಡಿ ಕಾಲುವೆ ಹೂಳೆತ್ತಲು (ಮಣ್ಣು ತೆಗೆಯಲು) 2.20 ಕೋಟಿ ಮೊತ್ತದ ಗುತ್ತಿಗೆ ನೀಡಲಾಗಿತ್ತು. ಹರಳಹಳ್ಳಿ ಕೆರೆ ಕೋಡಿ ಪುನರ್‌ನಿರ್ಮಾಣ ಮತ್ತು ಕಾಸ್‌ವೇ ಸೇತುವೆ ನಿರ್ಮಾಣಕ್ಕೆ 1.30 ಕೋಟಿ ಮೊತ್ತದ ಕಾಮಗಾರಿ ಹಾಗೂ ಹೊಸಹೊಳಲು ಕೆರೆಯ ಎರಡು ಕಡೆ ಕೋಡಿಯ ಮಣ್ಣು ತೆರವು, ಏರಿ ಪುನರ್ ನಿರ್ಮಾಣಕ್ಕೆ 2.70 ಮೊತ್ತದ ಕಾಮಗಾರಿ ನೀಡಲಾಗಿತ್ತು. ಇದರ ಜೊತೆಗೆ, ಇತರ ಏಳು ಸಣ್ಣ ಕಾಮಗಾರಿಗಳಿಗೆ 3.80 ಕೋಟಿ ರೂ. ಮೊತ್ತವನ್ನು ಮಂಜೂರು ಮಾಡಲಾಗಿತ್ತು. 

ಲಾಕ್‌ಡೌನ್‌ ಸಮಯದಲ್ಲೂ ತೆರೆದ ಕಚೇರಿ; ಮೇ 2020ರಲ್ಲಿ ಕೊಂಡುಕೊಂಡ ಸ್ಟಾಂಪ್ ಪೇಪರ್‌ನಲ್ಲಿ ಮಾರ್ಚ್ 2020ರಲ್ಲೇ ಕಾರ್ಯಾದೇಶ

ಈ ಮೂರು ಕೆರೆಗಳ ಅವ್ಯವಹಾರವನ್ನು ನೋಡಿ - 2019ರ ಅಕ್ಟೋಬರ್‌ನಲ್ಲಿ ಅತಿವೃಷ್ಟಿಯಾದರೆ ಮೂರು ತಿಂಗಳ ನಂತರ 2020ರ ಜನವರಿಯಲ್ಲಿ ಕೆಟಿಪಿಪಿಯಡಿ ತುರ್ತೆಂದು ಟೆಂಡರ್ ವಿನಾಯಿತಿಯ ಅನುಮತಿ ಸಿಗುವುದು - ಇಷ್ಟೇ ಅಲ್ಲ; ಇಂತಹ ʼತುರ್ತು ಕಾಮಗಾರಿʼಗೆ ಅದಾದ ಎರಡು ತಿಂಗಳ ನಂತರ (ಮಾರ್ಚ್ 27) ಅಂದಾಜುಪಟ್ಟಿಗೆ ತಾಂತ್ರಿಕ ಮಂಜೂರಾತಿ ದೊರೆಯುತ್ತದೆ. 
ಆಶ್ಚರ್ಯವೆಂದರೆ, ಮಾರ್ಚ್ 24ರಿಂದಲೇ ದೇಶಾದ್ಯಂತ ಕೇಂದ್ರ ಸರ್ಕಾರ ಕೋವಿಡ್ ಲಾಕ್‌ಡೌನ್‌ ಹೇರಿತ್ತು. ಅದು ಮೊದಲ ಲಾಕ್‌ಡೌನ್‌. ದೇಶ ಸಂಪೂರ್ಣ ಸ್ತಬ್ಧವಾದ ಅವಧಿ. ಆ ಸಮಯದಲ್ಲಿ ಪೊಲೀಸ್, ಆರೋಗ್ಯ ಸಿಬ್ಬಂದಿಗಳಂತಹ ತುರ್ತು ಕೆಲಸದ ಇಲಾಖೆಗಳ ವಿನಾ, ಬೇರಾವ ಸರ್ಕಾರಿ ನೌಕರರೂ ಕೆಲಸ ಮಾಡುತ್ತಿರಲಿಲ್ಲ. ಆದರೂ, ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರು ಯಾವ ಕಚೇರಿಯಲ್ಲಿ ಕೆಲಸ ಮಾಡಿದರು ಮತ್ತು ಆ ಕಚೇರಿಯನ್ನು ತೆರೆದವರು ಯಾರು?
ಈ ರೀತಿ ಮಾರ್ಚ್ 31ಕ್ಕೆ ಮುಗಿದಿರುವ ಕೆಲಸಕ್ಕೆ ಇಲಾಖೆ ಮತ್ತು ಗುತ್ತಿಗೆದಾರರ ನಡುವೆ ಒಪ್ಪಂದ ಯಾವಾಗ ಆಗಿದೆ ಗೊತ್ತೇ? ಸಹಜವಾಗಿ ಕೆಲಸದ ಆದೇಶ ಕೊಟ್ಟಾಗ ಆಗಬೇಕು. ಅದನ್ನು ತೋರಿಸುವ ಒಂದು ಕರಾರುಪತ್ರ ಕೂಡ ಇದೆ. ಆದರೆ, ಅಕ್ರಮ ಎಸಗುವ ಆತುರದಲ್ಲಿ ಅಧಿಕಾರಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅಧಿಕಾರಿಗಳು ತಾವು ಮಾಡಿರದ ಕೆಲಸಗಳನ್ನು ಮಾಡಿದ್ದೇವೆಂದು ತೋರಿಸಲು ಹೋಗಿ ಸಿಕ್ಕಿ ಹಾಕಿಕೊಳ್ಳುವುದು ಹೀಗೆಯೇ.. ಏಕೆಂದರೆ ಎಲ್ಲೋ ಕೂತ ʼಮೇಲಿನವರುʼ ರಾಜ ಮಹಾರಾಜರಂತೆ, ʼಅವರಿಗೆ ವರ್ಕ್ ಆರ್ಡರ್ ಕೊಡು, ಇವರಿಗೆ ಬಿಲ್ ಮಾಡು, ಚೆಕ್ ಪಾಸು ಮಾಡುʼ ಎಂಬ ಆದೇಶಗಳನ್ನು ನೀಡಿರುತ್ತಾರೆ. ಅವನ್ನು ಅಧಿಕಾರಿಗಳು ಶಿರಸಾವಹಿಸಿ ಪಾಲಿಸುತ್ತಾರೆ. ‘ಪೇಪರ್ ವರ್ಕ್’ ಮಾಡಲು ಸಮಯಾವಕಾಶ ಇರುವುದಿಲ್ಲ.

2020ರ ಮೇ 29 ಮತ್ತು 30ರಂದು ಇ-ಮುದ್ರಾಂಕ ಛಾಪಾ ಕಾಗದವನ್ನು ಗುತ್ತಿಗೆದಾರ ಖರೀದಿಸಿದ್ದು, ಅದರಲ್ಲಿ 2020ರ ಮಾರ್ಚ್ 27ರಂದೇ ಅಗ್ರಿಮೆಂಟ್‌ ಮಾಡಿಕೊಂಡಿರುವುದಾಗಿ ಟೈಪ್ ಮಾಡಿದ್ದರು. ಯಾವಾಗ ಈ ಎಲ್ಲಾ ದಾಖಲಾತಿಗಳನ್ನು ಮಾಹಿತಿ ಹಕ್ಕಿನಡಿ ಕೇಳುವುದು ಆರಂಭವಾಯಿತೋ ಆಗ ಅದನ್ನು ತಿದ್ದಿದರು. ಮೇ ತಿಂಗಳಿನಲ್ಲಿ ಖರೀದಿಸಿದ ಛಾಪಾಕಾಗದದ ಮೇಲೆ ಎರಡು ತಿಂಗಳ ಮುನ್ನ ಮಾರ್ಚ್‌ನಲ್ಲೇ ಅಗ್ರಿಮೆಂಟ್ ಮಾಡಿಕೊಳ್ಳಲು ಸಾಧ್ಯವೇ? ಹೀಗಾಗಿ ತಿದ್ದುವಾಗ ಅಲ್ಲಿ ಏನು ಬರೆದಿದ್ದೆವು ಎಂದು ಗೊತ್ತಾಗದ ಹಾಗೆ ಗೊಂದಲಮಯ ಮಾಡಿ ಬರೆದರು. (ಮೇಲಿನ ಚಿತ್ರ ನೋಡಿ). ಆದರೆ ಯಾವುದೇ ಕಾಮಗಾರಿ ಮುಗಿದ ನಂತರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಕಾಮಗಾರಿ ಮುಗಿದ ಎರಡು ತಿಂಗಳ ನಂತರ ಯಾವ ರೀತಿ ಕಾಮಗಾರಿ ಮಾಡುತ್ತೇವೆಂದು ಒಪ್ಪಂದ ಮಾಡಿಕೊಂಡಂತೆ ದಾಖಲೆ ಸೃಷ್ಟಿಯಾಗಿದೆ.

ಮೂರೇ ದಿನದಲ್ಲಿ ತಾಂತ್ರಿಕ ಮಂಜೂರಾತಿ – ವರ್ಕ್ ಆರ್ಡರ್ – ಬಿಲ್: ಎಲ್ಲವೂ ಲಾಕ್ಡೌನ್ ಸಮಯದಲ್ಲೇ..!

ದೇಶಾದ್ಯಂತ ಲಾಕ್ಡೌನ್ ಹೇರಲಾಗಿತ್ತು. ಎಲ್ಲ ಕೆಲಸ, ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಯಾವೊಂದು ಕಾಮಗಾರಿಗಳೂ ಎಲ್ಲಿಯೂ ನಡೆಯುತ್ತಿರಲಿಲ್ಲ. ಆದರೂ, ಕೆಆರ್ ಪೇಟೆ ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಚೇರಿ ಮಾತ್ರ ತೆರೆದಿತ್ತು ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ವಾಸ್ತವವಾಗಿ ಕೆಆರ್ ಪೇಟೆಯಲ್ಲೂ ಲಾಕ್ಡೌನ್ ಜಾರಿಯಲ್ಲಿತ್ತು. ಎಲ್ಲ ಕಚೇರಿಗಳಂತೆ ಹೇಮಾವತಿ ನಾಲಾ ವಿಭಾಗದ ಕಚೇರಿಯೂ ಮುಚ್ಚಿತ್ತು. ಆದರೆ, ಗುತ್ತಿಗೆ ಹಣ ಕ್ಲೈಮ್ ಮಾಡುವ ಉದ್ದೇಶದಿಂದ ಹಾಜರಾತಿ ಪುಸ್ತಕವನ್ನೂ ತಿರುಚಿ ಕೆಲವರಿಂದ ಹಾಜರಾತಿ ಪಡೆದುಕೊಳ್ಳಲಾಗಿದೆ. 

ಈ ರೀತಿ ನಕಲಿ ಹಾಜರಾತಿ ಸೃಷ್ಟಿಸಿದ್ದು ಮಾತ್ರವಲ್ಲದೆ, ಮೂರೇ ದಿನದಲ್ಲಿ ತಾಂತ್ರಿಕ ಮಂಜೂರಾತಿ – ವರ್ಕ್ ಆರ್ಡರ್ – ಬಿಲ್ ಎಲ್ಲವನ್ನೂ ನೀಡಲಾಗಿದೆ. ಅದೂ ಲಾಕ್ಡೌನ್ ಸಮಯದಲ್ಲೇ.. 2020ರ ಜನವರಿ ತಿಂಗಳಲ್ಲಿ ಅನುಮತಿ ನೀಡಲಾಗಿದ್ದ ಕಾಮಗಾರಿಗೆ 2020ರ ಮಾರ್ಚ್ 27ರಂದು ತಾಂತ್ರಿಕ ಮಂಜೂರಾತಿ ನೀಡಲಾಗಿದೆ. ಅದಾದ ನಂತರ ನಡೆದಿರುವುದೆಲ್ಲವೂ ಸೋಜಿಗದ ವಿದ್ಯಮಾನ.

ಗುತ್ತಿಗೆದಾರ ಸಲ್ಲಿಸಿದ್ದ ಅಂದಾಜುಪಟ್ಟಿಗಳಿಗೆ ಹೇಮಾವತಿ ನಾಲಾ ಕಚೇರಿಯ ಮುಖ್ಯ ಎಂಜಿನಿಯರ್ 2020ರ ಮಾರ್ಚ್ 27ರಂದು ತಾಂತ್ರಿಕ ಅನುಮೋದನೆ ನೀಡಿದ್ದಾರೆ. ಅದೇ ದಿನ ಕಾಮಗಾರಿ ಕೈಗೊಳ್ಳಲು ಆದೇಶವನ್ನೂ (ವರ್ಕ್ ಆರ್ಡರ್) ಹೊರಡಿಸಿದ್ದಾರೆ. ಆ ವರ್ಕ್ ಆರ್ಡರ್‌ನಲ್ಲಿ 60 ದಿನಗಳ ಒಳಗಾಗಿ ಕಾಮಗಾರಿ ಮುಗಿಸಬೇಕೆಂದು ಆದೇಶಿಸಲಾಗಿತ್ತು. ಆದರೆ, ಮೂರೇ ದಿನದಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾರ್ಚ್ 31ರಂದು ಬಿಲ್ ಸಿದ್ದಪಡಿಸಿದ್ದಾರೆ. 6 ಕೋಟಿ ರೂ. ಹಣ ಮಂಜೂರು ಮಾಡಿದ್ದಾರೆ. ಅಂದರೆ, 60 ದಿನಗಳಲ್ಲಿ ನಡೆಯಬೇಕಿದ್ದ ಕಾಮಗಾರಿಯನ್ನು ಗುತ್ತಿಗೆದಾರರು ರೋಬೋಟ್ ರೀತಿಯಲ್ಲಿ ಕೆಲಸ ಮಾಡಿ, ಮೂರೇ ದಿನಗಳಲ್ಲಿ “ಪೂರ್ಣಗೊಳಿಸಿದ್ದಾರೆ”. 

ಅಂದರೆ, ಇದು ಅವ್ಯವಹಾರವಲ್ಲವೇ? ಲಾಕ್ಡೌನ್ ಸಮಯದಲ್ಲಿ ಮೂರು ದಿನಗಳಲ್ಲಿ ಕಾಮಗಾರಿ ಮುಗಿಸಲು ಬಂದ ಕಾರ್ಮಿಕರಾದರೂ ಯಾರು? ಅವೆರೆಲ್ಲರೂ ಯಾವ ರೀತಿ ಕೆಲಸ ಮಾಡಿದರು. ಎಷ್ಟು ಜನ ಕೆಲಸ ಮಾಡಿದರು? ಎಂದು ನೋಡಿದರೆ ಬ್ರಹ್ಮಾಂಡ ಭ್ರಷ್ಟಾಚಾರದ ಬಣ್ಣ ಬಯಲಾಗುತ್ತದೆ. ಏಕೆಂದರೆ ಹರಳಹಳ್ಳಿ ಕೆರೆಯದ್ದನ್ನು ಬಿಟ್ಟರೆ ಉಳಿದ ಕೆರೆಗಳಿಗೆ ಯಾವ ಅಪಾಯವೂ ಆಗಿರದೇ ಇದ್ದುದರಿಂದ, ಆ ಕೆಲಸ ಮಾಡುವ ಅಗತ್ಯವೇ ಇರಲಿಲ್ಲ.

ಗುತ್ತಿಗೆದಾರರನ್ನೇ ಅದಲು-ಬದಲು ಮಾಡಿದ ಎಂಜಿನಿಯರ್

ಕೆರೆ ಕಾಮಗಾರಿಗಳ ಪೈಕಿ ಕೆ.ಆರ್.ಪೇಟೆ ತಾಲೂಕಿನ ಹರಳಹಳ್ಳಿ ಕೆರೆ ಕಾಮಗಾರಿಯನ್ನು ಎಚ್ಎನ್ ಶಿವರಾಮು ಎಂಬುವರಿಗೆ ನೀಡಲಾಗಿತ್ತು. ಸ್ಪಷ್ಟವಾಗಿ ಅವರ ವಿಳಾಸ ಎಚ್.ಎನ್ ಶಿವರಾಮು, ಪ್ರಥಮದರ್ಜೆ ಗುತ್ತಿಗೆದಾರ, ಹರಳಹಳ್ಳಿ ಅಂಚೆ, ಕೆಆರ್ ಪೇಟೆ ತಾಲೂಕು ಎಂದು ಉಲ್ಲೇಖಿಸಲಾಗಿರುವ ಕಾಮಗಾರಿಯ ಅದೇಶ ಪ್ರತಿಯನ್ನು 27 ಮಾರ್ಚ್ 2020ರಂದು ನೀಡಲಾಗಿತ್ತು. ನಂತರ, ಅಂದರೆ 2020ರ ಅಕ್ಟೋಬರ್ 07 ರಂದು ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡ ಎಂಜಿನಿಯರ್ ತನ್ನ ಕಣ್ತಪ್ಪಿನಿಂದ ಕಾಮಗಾರಿ ಗುತ್ತಿಗೆದಾರರ ಹೆಸರು ಬದಲಾಗಿದೆ ಎಂದು ಸಮಜಾಯಷಿ ನೀಡಿದ್ದಾರೆ. ಹರಳಹಳ್ಳಿ ಕೆರೆ ಕಾಮಗಾರಿಯು ಎಚ್ ಎನ್ ಶಿವರಾಮು ಅವರಿಗಲ್ಲ, ಪಿ.ಕೆ ಶಿವರಾಮು ಅವರ ಆರ್‌ಕೆಬಿ ಬ್ರದರ್ಸ್, ಇನ್ಸ್ಟ್ರಪೋಪ್ ಪ್ರೊವೆಂಚರ್ ಪ್ರೈವೆಟ್ ಲಿಮಿಟೆಡ್‌ಗೆ ನೀಡಲಾಗಿದೆ ಎಂದು ತಿದ್ದುಪಡಿ ಪತ್ರವನ್ನು ನೀಡಲಾಗಿದೆ. 

ಅಕ್ಟೋಬರ್ ತಿಂಗಳಿನಲ್ಲಿ ಸಮಜಾಯಿಷಿ, ತಿದ್ದುಪಡಿ ಪತ್ರ ನೀಡಲಾಗಿದ್ದರೂ, ಮಂಜೂರಾದ ಹಣವನ್ನು ಮಾರ್ಚ್ ತಿಂಗಳಿನಲ್ಲಿಯೇ ಪಿ.ಕೆ ಶಿವರಾಮು ಅವರಿಗೆ ನೀಡಲಾಗಿತ್ತು. ಅಂದರೆ, ಇಲ್ಲಿಯೂ ಗೋಲ್ಮಾಲ್ ನಡೆದಿರುವುದು ನಿಚ್ಚಳ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ʼಶಿವರಾಮು ಎಂಬ ನಿಮ್ಮ ವ್ಯಕ್ತಿಗತ ಹೆಸರಿಗೆ ಹಿಂದಿನ ಕಾರ್ಯಾದೇಶವನ್ನು ಹೊರಡಿಸಲಾಗಿತ್ತು. ಆದರೆ ಇದು ನೀವು ಮತ್ತು ನಿಮ್ಮ ಸೋದರರ ಒಡೆತನದಲ್ಲಿರುವ ಸಂಸ್ಥೆಯ ಹೆಸರಿಗೆ ಬರೆಯಬೇಕಿತ್ತುʼ ಎಂಬ ಸಮಜಾಯಿಷಿ ಪತ್ರವನ್ನು ಅಕ್ಟೋಬರ್‌ನಲ್ಲಿ ಬರೆಯಲಾಗುತ್ತದೆ. ವಾಸ್ತವವೇನೆಂದರೆ ಬಹಳ ಸ್ಪಷ್ಟವಾಗಿ ಹರಳಹಳ್ಳಿಯ ಎಚ್‌.ಎನ್‌.ಶಿವರಾಮು ಅವರ ಹೆಸರಿಗೇನೇ (ವಿಳಾಸ ಸಮೇತ) ಕಾರ್ಯಾದೇಶ ನೀಡಿರುವುದು ಮೇಲಿನ ದಾಖಲೆಗಳಲ್ಲಿ ಕಾಣುತ್ತದೆ.

ಹೀಗೆ ಆಗಲು ಹೇಗೆ ಸಾಧ್ಯ? ʼಇವರ ಹೆಸರಿಗೆ ಅನುಮೋದನೆ ಕೊಡುʼ, ʼಇವರ ಹೆಸರಿಗೆ ವರ್ಕ್‌ ಆರ್ಡರ್‌ ಕೊಡುʼ ಎಂದು ಯಾರೋ ಹೇಳಿ, ನಂತರ ಮೌಖಿಕವಾಗಿ ʼಅವರು ಬೇಡ, ಇವರೇ ವರ್ಕ್‌ ಮಾಡಲಿʼ ಎಂದು ಆದೇಶಿಸಿರಬೇಕು. ಬಿಲ್‌ ಮಾಡುವಾಗ ʼಅವರʼ ಬದಲಿಗೆ ʼಇವರʼ ಹೆಸರಿಗೇ ಬಿಲ್‌ ಆಗಿಬಿಟ್ಟಿದೆ. ಇಲ್ಲವಾದರೆ ಕಾರ್ಯಾದೇಶ ಒಬ್ಬರ ಹೆಸರಿಗೆ, ಬಿಲ್‌ ಇನ್ನೊಬ್ಬರ ಹೆಸರಿಗೆ ಆಗಲು ಹೇಗೆ ಸಾಧ್ಯ? ಒಂದು ವೇಳೆ ಇದೇ ನಿಜವಾದರೆ, ಆ ಸಂದರ್ಭದಲ್ಲಿ ಇಂತಹ ಆದೇಶ ನೀಡಿದವರು ಯಾರಿರಬಹುದು? ಸ್ವತಃ ಮುಖ್ಯಮಂತ್ರಿ ಬೂಕನಕೆರೆ (ಇದು ಕೆ.ಆರ್‌.ಪೇಟೆ ತಾಲೂಕಿನಲ್ಲೇ ಇದೆ) ಸಿದ್ದಲಿಂಗಪ್ಪ ಯಡಿಯೂರಪ್ಪನವರೇ ಹೊಂದಿದ್ದ ಖಾತೆಯಲ್ಲಿ? ಇದನ್ನು ಊಹೆ ಮಾಡುವವರಿಗೆ ಬಹುಮಾನವೇನೂ ಇಲ್ಲ; ಏಕೆಂದರೆ ಕೆ.ಆರ್‌.ಪೇಟೆಯ ಆ ಅವಧಿಯ ಕಾರುಬಾರನ್ನು ಬಲ್ಲವರೆಲ್ಲರಿಗೂ ಸತ್ಯ ಗೊತ್ತಿದೆ.
ಕೆ.ಆರ್.ಪೇಟೆಯ ಉಪಚುನಾವಣೆ ನಡೆದಿದ್ದು ಡಿಸೆಂಬರ್‌ 2019ರಲ್ಲಿ. ಸದರಿ ಕಾಮಗಾರಿಯ ಗುತ್ತಿಗೆದಾರರ ತೋಟದ ಮನೆಯಲ್ಲೇ ರಾಜ್ಯದ ಯುವ ರಾಜಕಾರಣಿಯೊಬ್ಬರು ತಂಗಿದ್ದು, ಅಲ್ಲಿಂದಲೇ ಇಡೀ ಚುನಾವಣೆಯ ಉಸ್ತುವಾರಿ ನಡೆಸಿದ್ದು, ಕೆ.ಆರ್.ಪೇಟೆಯ ರಾಜಕೀಯಾಸಕ್ತರೆಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿಯೇ ಈ ʼಸ್ಥಳೀಯʼ ಹಗರಣಕ್ಕೆ ರಾಜ್ಯ ಮಟ್ಟದ ಮಹತ್ವ ಬಂದುಬಿಟ್ಟಿದೆ.

UDAYAVANI NEWS ಕರ್ನಾಟಕದ ಜನರ ಮುಂದೆ ಇಡಲು ಹೊರಟಿರುವ ಮೂರು ಕಾಮಗಾರಿಗಳ ಪೈಕಿ ಇದು ಅತ್ಯಂತ ಕಡಿಮೆ ಮೊತ್ತದ್ದು ಎಂದು ಸ್ಪಷ್ಟಪಡಿಸಬಯಸುತ್ತೇವೆ. ಮುಂದಿನ ಭಾಗಗಳಲ್ಲಿ ವರದಿಯಾಗಲಿರುವ ಕಾಮಗಾರಿಗಳೂ ಬೃಹತ್ತಾದವು; ಭ್ರಷ್ಟಾಚಾರವೂ ಬೃಹತ್ತಾದದ್ದು.


Post a Comment

Previous Post Next Post